ಶ್ರೀನಿವಾಸಪುರ: ಮೂರ್ಛೆ ರೋಗ ದೀರ್ವಾಗಿ ಉಳಿಯುವ ಕಾಯಿಲೆ ಅಲ್ಲ. ಸರಿಯಾದ ಚಿಕಿತ್ಸೆ ಸಿಕ್ಕರೆ ಆದಷ್ಟು ಬೇಗ ಗುಣಮುಖ ಆಗಬಹುದು. ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಈ ಕಾಯಿಲೆಗೆ ಒಳಗಾಗಿರುವ ರೋಗಿಗಳನ್ನು ಗುಣಮುಖಪಡಿಸಲು ಇಂಥಹ ಶಿಬಿರಗಳು ಸಹಕಾರಿಯಾಗಿವೆ ಎಂದು ರೋಟರಿ ಉಪ ಪ್ರಾಂತಪಾಲ ಸಿ.ಎಂ.ಆರ್. ಶ್ರೀನಾಥ್ ಹೇಳಿದರು.
ಗೌನಿಪಲ್ಲಿ ಆರೋಗ್ಯ ಸಮುದಾಯ ಕೇಂದ್ರದ ಆವರಣದಲ್ಲಿ ಬೆಂಗಳೂರಿನ ರೋಟರಿ ಕ್ಲಬ್, ಆಸ್ಟರ್ ಆಸ್ವತ್ರೆ ತಂಡದಿಂದ ಶನಿವಾರ ಆಯೋಜಿಸಿದ್ದ ಅಪಸ್ಮಾರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ಕಾಯಿಲೆ ನಿವಾರಿಸಿಕೊಳ್ಳಲು ಬೆಂಗಳೂರಿಗೆ ತೆರಳಿ ಈಜಿ ಮಿಷನ್ ಎಂ.ಆರ್.ಐ ಮಾಡಿಸಿಕೊಳ್ಳಲು ಹೆಚ್ಚು ಹಣ ಭರಿಸಬೇಕಾಗುತ್ತದೆ. ಈ ಭಾಗದ ರೋಗಿಗಳಿಗೆ ಅನುಕೂಲವಾಗಲು ಈ ಶಿಬಿರ ಆಯೋಜಿಸಲಾಗಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಆಸ್ಟರ್ ಆಸ್ವತ್ರೆಯ ಡಾ.ಸತೀಶ್ ರುದ್ರಪ್ಪ ಮಾತನಾಡಿ, ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಮೌಲ್ಯ ಮಾಪನ ಮಾಡುತ್ತೇವೆ. ಬೆಂಗಳೂರಿನ ಅಸ್ವತ್ರೆಯಲ್ಲಿ ನುರಿತ ತಜ್ಞರಿಂದ ಉಚಿತವಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಮೆಹಬೂಬ್ ಷರೀಫ್ ಮಾತನಾಡಿ, ಹಲವು ವರ್ಷಗಳಿಂದ ಈ ಶಿಬಿರ ಮಾಡಬೇಕೆಂಬ ಹಂಬಲ ಇತ್ತು. ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಈ ಶಿಬಿರ ನಡೆಸಬೇಕು. ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಸಹಕರಿಸಬೇಕು ಎಂದು ತಿಳಿಸಿದರು.
ನಿತಿನ್, ಸ್ಟೀಪಂಡ್ ಡೇವಿಡ್ ಕಾರ್ತಿಕ್, ರಾಜೇಶ್, ಟಿಎಚ್ಒ, ಡಾ. ಸರ್ವೇಶ್ ಇದ್ದರು.