Environment Day | ಪ್ರಶಸ್ತಿ ವಿಜೇತ ಮಕ್ಕಳೊಂದಿಗೆ ಗಣ್ಯರು
ಬೆಂಗಳೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಶುಕ್ರವಾರ ಶಾಲಾಮಕ್ಕಳಿಗಾಗಿ ಆಯೋಜಿಸಿದ್ದ ‘ಚಿತ್ರಕಲಾ ಸ್ಪರ್ಧೆ’ ಯಶಸ್ವಿಯಾಗಿ ಜರುಗಿತು.
ಚಾಮರಾಜಪೇಟೆಯ ಮಕ್ಕಳ ಕೂಟ ಆವರಣದಲ್ಲಿರುವ ತಂಪಾದ ವಾತಾವರಣದಲ್ಲಿ ಮರಗಳ ನೆರಳಿನಲ್ಲಿ ಮಕ್ಕಳು ಬಣ್ಣಬಣ್ಣದ ಪೆನ್ಸಿಲ್, ಡ್ರಾಯಿಂಗ್ ಶೀಟ್ ಹಿಡಿದು ತಮ್ಮ ಮನದಲ್ಲಿರುವ ಕಲ್ಪನೆಯನ್ನು ಚಿತ್ತಾರವಾಗಿ ಕಾಗದದ ಮೇಲೆ ಮೂಡಿಸಿದರು. ಪುಟಾಣಿಗಳ ಮುಗ್ಧತೆ, ಕೌತುಕ, ಉತ್ಸಾಹ ಜನಮನ ಸೆಳೆದವು.
ಸ್ಪರ್ಧೆಗೆ ಅಖಿಲ ಕರ್ನಾಟಕ ಮಕ್ಕಳ ಕೂಟ ಸಹಯೋಗ ಕೊಟ್ಟರೆ, ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಸಹಕಾರ ನೀಡಿತು. ಕಾರ್ಯಕ್ರಮಕ್ಕೆ ಚಾಲನೆ ವೇಳೆ ಕಲಾವಿದ ಬಾದಲ್ ನಂಜುಂಡಸ್ವಾಮಿ, ಅಖಿಲ ಕರ್ನಾಟಕ ಮಕ್ಕಳ ಕೂಟ ಅಧ್ಯಕ್ಷ ಡಾ. ಕೆ. ಮೋಹನ್‌ದೇವ್ ಆಳ್ವಾ, ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷ ಡಾ. ಎನ್.ಎಸ್. ಕೃಷ್ಣಮೂರ್ತಿ, ಮಕ್ಕಳಕೂಟದ ಕೋಶಾಧಿಕಾರಿ ವೆಂಕಟೇಶ್, ಸಂಯೋಜಕ ಮುನಿಸ್ವಾಮಿ, ‘ವಿಜಯವಾಣಿ’ ಸಂಪಾದಕ ಕೆ.ಎನ್. ಚನ್ನೇಗೌಡ, ಡಿಜಿಟಲ್ ವಿಭಾಗದ ಸಂಪಾದಕ ಸಿದ್ದು ಕಾಳೋಜಿ, ವಿಆರ್‌ಎಲ್ ಮೀಡಿಯಾ ಉಪಾಧ್ಯಕ್ಷ ಅರುಣ್ ಕೆ.ಆರ್. ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
32 ಶಾಲೆಗಳ 1,300 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿರುವ 32 ಶಾಲೆಗಳ 1,300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಪಾಲಕರು/ ಶಾಲಾ ಸಿಬ್ಬಂದಿಯೊಂದಿಗೆ ಆಗಮಿಸಿ ಭಾಗವಹಿಸಿದರು. ಪ್ರಕೃತಿಯ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಪ್ರಜ್ಞೆ ಮೂಡಿಸಿದ್ದಕ್ಕಾಗಿ ಪಾಲಕರು ‘ವಿಜಯವಾಣಿ’ಗೆ ಅಭಿನಂದನೆಗಳನ್ನು ಸಲ್ಲಿಸಿದರು.
ತೀರ್ಪುಗಾರರು ಫಿದಾ: ಮಕ್ಕಳಿಗೆ ಚಿತ್ರ ಬಿಡಿಸಲು ‘ಪ್ರಕೃತಿಯಿಂದ ಸ್ಫೂರ್ತಿ ಪಡೆಯೋಣ: ಹವಾಮಾನ ಸಂರಕ್ಷಣೆಗಾಗಿ- ನಮ್ಮೆಲ್ಲರ ಭವಿಷ್ಯಕ್ಕಾಗಿ’ ಎಂಬ ವಿಷಯ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ ಮಕ್ಕಳು ರಚಿಸಿದ ಚಿತ್ರಗಳನ್ನು ನೋಡಿ ತೀರ್ಪುಗಾರರೇ ಆಶ್ಚರ್ಯಪಟ್ಟಿದ್ದು ಗಮನಾರ್ಹ. ತೀರ್ಪುಗಾರರಾಗಿ ಕಲಾವಿದರಾದ ವಿ.ಆರ್.ಸಿ. ಶೇಖರ್ ಮತ್ತು ಸುನೀಲ್ ಮಿಶ್ರಾ ಕಾರ್ಯನಿರ್ವಹಿಸಿದರು. 7ರಿಂದ 16 ವರ್ಷದೊಳಗಿನ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಯಿತು. 2, 3 ಮತ್ತು 4ನೇ ತರಗತಿ ವಿದ್ಯಾರ್ಥಿಗಳಿಗೆ ಸಬ್ ಜೂನಿಯರ್, 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಜೂನಿಯರ್ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೀನಿಯರ್ ಎಂದು ಮೂರು ವಿಭಾಗಗಳನ್ನು ಮಾಡಲಾಗಿತ್ತು.
ಪ್ರಥಮ ಪುಳಕ ವಿಚಾರ ಪ್ರೇರಕ
ಮರುಗಿದ ವನದೇವಿ: ಸೀನಿಯರ್ ವಿಭಾಗದಲ್ಲಿ ಮೊದಲ ಬಹುಮಾನ ಬಾಚಿಕೊಂಡ ಶ್ರೀ ಚೈತನ್ಯ ಶಾಲೆಯ 9ನೇ ತರಗತಿ ವಿದ್ಯಾರ್ಥಿ ನಿಶ್ಚಿತ್ ನರೇಶ್ ಜನ್ನು ರಚಿಸಿದ್ದ ಚಿತ್ರದಲ್ಲಿ ಮಾನವನು ಪರಿಸರದ ಮೇಲೆ ನಡೆಸುತ್ತಿರುವ ದಬ್ಬಾಳಿಕೆ, ಮರಗಳ ಕಟಾವು, ಕೈಗಾರಿಕೆಗಳ ಮೂಲಕ ವಾಯುಮಾಲಿನ್ಯ ಇತ್ಯಾದಿ ಬಗ್ಗೆ ಚಿಂತಿಸಲು ಪ್ರೇರಣೆ ನೀಡಿತು.
ಗೋ ಗ್ರೀನ್ ಎಂದ ಸಬ್ ಜೂನಿಯರ್: ದಿನದಿಂದ ದಿನಕ್ಕೆ ಪರಿಸರದ ಮೇಲೆ ಬೀರುತ್ತಿರುವ ಪರಿಣಾಮಗಳು ಹಾನಿಕಾರಕವಾಗಿವೆ. ಇದರಿಂದ ಪರಿಸರದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತಿದೆ. ಹೀಗೆಯೇ ಮುಂದುವರಿದರೆ ಪ್ರಕೃತಿಯಲ್ಲಿ ಜೀವರಾಶಿಗಳಿಗೆ ಉಳಿಗಾಲವಿಲ್ಲ ಎಂಬುದನ್ನು ಚಂದ್ರಾ ಬಡಾವಣೆಯ ಶ್ರೀ ಸಿದ್ಧಗಂಗಾ ಹೈಯರ್ ಪ್ರೈಮರಿ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಅನಘಾ ಬಂಗಾಲಿ ಚಿತ್ರಮುಖೇನ ಸಂದೇಶ ರವಾನಿಸಿದಳು. ಈ ಚಿತ್ರ ಸಬ್ ಜೂನಿಯರ್ ವಿಭಾಗದಲ್ಲಿ ಮೊದಲ ಬಹುಮಾನ ಗಳಿಸಿತು.
ಅಂತರ್ಜಲ, ಓಜೋನ್ ಪದರ ಕಾಪಾಡಿ: ಜೂನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಮೂಡಲಪಾಳ್ಯದ ಸೇಂಟ್ ಜೇವಿಯರ್ ಹೈಸ್ಕೂಲ್ ವಿದ್ಯಾರ್ಥಿನಿ ಮಾನ್ಯ ಡಿ. ತನ್ನದಾಗಿಸಿಕೊಂಡಳು. ಅಂತರ್ಜಲ, ವಾಯುಮಾಲಿನ್ಯ, ಮಣ್ಣಿನ ಮಾಲಿನ್ಯ ಮಾಡುವುದರಿಂದ ಪ್ರಕೃತಿ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳನ್ನು ತನ್ನದೇ ಕಲ್ಪನೆಯಲ್ಲಿ ಸಾಕಾರ ರೂಪ ನೀಡಿದ ಬಗೆ ತೀರ್ಪುಗಾರರ ಮನಗೆದ್ದಿತು.
ಯಾರಿಗೆ ಯಾವ ವಿಭಾಗದಲ್ಲಿ ಬಹುಮಾನ?
ಸಬ್ ಜೂನಿಯರ್
ಪ್ರಥಮ: ಅನಘಾ ಬಂಗಾಲಿ, ಶ್ರೀ ಸಿದ್ಧಗಂಗಾ ಹೈಯರ್ ಪ್ರೈಮರಿ ಸ್ಕೂಲ್, ಚಂದ್ರಾಲೇಔಟ್
ದ್ವಿತೀಯ: ನಿವಿಕ್ ಕಿರಣ್ ಹೆಗಡೆ, ಸೇಂಟ್ ಪೀಟರ್ ಸ್ಕೂಲ್, ಹೊಸಕೆರೆಹಳ್ಳಿ
ತೃತೀಯ: ನವನೀತ್, ಸೇಂಟ್ ಲಾರೆನ್ಸ್ ಶಾಲೆ
ಮೆಚ್ಚುಗೆ ಪಡೆದವರು:
ಎಸ್. ಪ್ರಣವ್ ಭಟ್, ಶ್ರೀ ಅಯ್ಯಪ್ಪ ಎಜುಕೇಷನ್ ಸೆಂಟರ್
ಶ್ರೇಯಸ್ ಗೌಡ, ಈಸ್ಟ್ ವೆಸ್ಟ್ ಪಬ್ಲಿಕ್ ಸ್ಕೂಲ್
ಜೂನಿಯರ್
ಪ್ರಥಮ: ಮಾನ್ಯ ಡಿ. ಗಂಗೇಮನೆ, ಸೇಂಟ್ ಜೇವಿಯರ್ ಹೈಸ್ಕೂಲ್, ಮೂಡಲಪಾಳ್ಯ
ದ್ವಿತೀಯ: ವಿ. ಓವಿಯಾ, ಶ್ರೀ ಸಿದ್ಧಗಂಗಾ ಹೈಯರ್ ಪ್ರೈಮರಿ ಸ್ಕೂಲ್, ಚಂದ್ರಾಲೇಔಟ್
ತೃತೀಯ: ಅಪೇಕ್ಷಾ ಹರೀಶ್, ಲಲಿತ್ ಕ್ಯಾಸಲ್ ಇಂಟರ್ ನ್ಯಾಷನಲ್ ಸ್ಕೂಲ್
ಮೆಚ್ಚುಗೆ ಪಡೆದವರು:
ಆರಾಧ್ಯಾ, ಸೇಂಟ್ ಲಾರೆನ್ಸ್ ಶಾಲೆ
ಎಸ್. ಮನೋಜ್, ಸೇಂಟ್ ಯಶ್ ಪಬ್ಲಿಕ್ ಶಾಲೆ
ಸೀನಿಯರ್
ಪ್ರಥಮ: ನಿಶ್ಚಿತ್ ನರೇಶ್ ಜನ್ನು, ಶ್ರೀ ಚೈತನ್ಯ ಶಾಲೆ
ದ್ವಿತೀಯ: S. ಪ್ರಣತಿ ಭಟ್, ಶ್ರೀ ಅಯ್ಯಪ್ಪ ಎಜುಕೇಷನ್ ಸೆಂಟರ್
ತೃತೀಯ: ಕೆ. ಶ್ರೀನಿಧಿ, ಕೆಪಿಎಸ್ ನ್ಯೂ ವಾಣಿವಿಲಾಸ್, ವಿ.ವಿ. ಪುರ
ಮೆಚ್ಚುಗೆ ಪಡೆದವರು:
ಶ್ವಥಿ ಹೆಗಡೆ, ಸ್ಟೆಲ್ಲಾ ಮೇರೀಸ್ ಶಾಲೆ
ಆರ್. ಕೀರ್ತನಾ, ಜಯಶ್ರೀ ಪಬ್ಲಿಕ್ ಶಾಲೆ
ಶಿಕ್ಷಕಿಯಿಂದ ಏಕಾಗ್ರತೆಯ ಆಟ
ಶ್ರೀ ಸಿದ್ಧಗಂಗಾ ಶಾಲೆಯ ಶಿಕ್ಷಕಿ ರಂಗಲಕ್ಷ್ಮೀ ಶ್ರೀನಿವಾಸ್ ಅವರು ಮಕ್ಕಳಿಗೆ ಏಕಾಗ್ರತೆ ಆಟವನ್ನು ಆಡಿಸಿದರು. ಪ್ರಾಣಿಗಳು, ಪಕ್ಷಿಗಳು, ನೆಲ, ಜಲ ಮತ್ತು ಪರಿಸರ ಎಂದು ಹೇಳಿದಾಗ ಮಕ್ಕಳು ಕೈಯನ್ನು ತಲೆ, ಭುಜದ ಮೇಲೆ ಇಟ್ಟುಕೊಳ್ಳುವ ಆಟವಿದು. ಇದರಿಂದ ಮಕ್ಕಳ ಮನಸ್ಸು ಬೇರೆಡೆ ಸಾಗದೆ, ಏನು ಹೇಳುತ್ತಿದ್ದಾರೆಂಬುದರ ಮೇಲೆಯೇ ಗಮನಹರಿಸುವಂತೆ ಮಾಡಿದರು.
ನಗದು ಬಹುಮಾನ, ಪಾರಿತೋಷಕ
ಸ್ಪರ್ಧೆಯ ಮೂರೂ ವಿಭಾಗದ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ 3 ಸಾವಿರ ರೂ., 2 ಸಾವಿರ ರೂ., 1 ಸಾವಿರ ರೂ. ನಗದು, ಪಾರಿತೋಷಕ ಮತ್ತು ಪ್ರಶಂಸಾ ಪತ್ರ ವಿತರಿಸಿ ಗೌರವಿಸಲಾಯಿತು. ಪ್ರತಿ ಸ್ಪರ್ಧೆಯಲ್ಲಿ ತಲಾ ಇಬ್ಬರಿಗೆ ‘ಮೆಚ್ಚುಗೆ ಪಡೆದ ಚಿತ್ರ’ ಪ್ರಮಾಣ ಪತ್ರ ನೀಡಲಾಯಿತು.
ವಿದುಷಿ ಪೂರ್ಣಿಮಾ ಗಾಯನ ಆಕರ್ಷಣೆ
ಕಾರ್ಯಕ್ರಮದಲ್ಲಿ ವಿದುಷಿ ಪೂರ್ಣಿಮಾ ಅನುಗೊಂಡನಹಳ್ಳಿ ಪರಿಸರ ಗೀತೆಗಳ ಗಾಯನ ಪ್ರಸ್ತುತಪಡಿಸಿದರು. ಬಳಿಕ ವೇದಿಕೆ ಕಾರ್ಯಕ್ರಮದ ಪ್ರಾರ್ಥನೆ ನೆರವೇರಿಸಿದರು. ಮಧುರ ಗಾಯನದಿಂದ ಆಕರ್ಷಿಸಿದರು.
ಚಿತ್ರಕಲೆ ಸೈ... ಗಾಯನಕ್ಕೂ ಜೈ!
ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಕ್ಕಳು ಕೇವಲ ಚಿತ್ರಕಲೆ ಜತೆಗೆ ವೇದಿಕೆಯಲ್ಲಿ ಗಾಯನದ ಮೂಲಕವೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಇದಕ್ಕೆ ನೆರೆದವರು ಕರತಾಡನದ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿದರು.
ಅಥೆನಾ ಶಾಲೆಯಿಂದ ಗಿಡ ವಿತರಣೆ
ಕಾರ್ಯಕ್ರಮದಲ್ಲಿ ಚಾಮರಾಜಪೇಟೆಯ ಅಥೆನಾ ಸ್ಕೂಲ್‌ನಿಂದ 500ಕ್ಕೂ ಹೆಚ್ಚು ಗಿಡಗಳನ್ನು ವಿತರಣೆ ಮಾಡಲಾಯಿತು. ಮಕ್ಕಳು, ಪಾಲಕರು ಮತ್ತು ಶಿಕ್ಷಕರಿಗೆ ಗಿಡ ವಿತರಿಸಿ ಪರಿಸರ ದಿನಾಚರಣೆ ಶುಭಾಶಯಗಳನ್ನು ಕೋರಿದರು.
ಪಾಲಕರು, ಶಿಕ್ಷಕರಿಂದ ಪ್ರಶಂಸೆ
ಬೆಂಗಳೂರು: ಚಾಮರಾಜಪೇಟೆಯ ಮಕ್ಕಳ ಕೂಟ ಆವರಣದಲ್ಲಿ ಶಾಲಾ ಮಕ್ಕಳಿಗಾಗಿ ‘ವಿಜಯವಾಣಿ’ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಗೆ ಪಾಲಕರು ಮತ್ತು ಶಿಕ್ಷಕರು ತುಂಬ ಸಂತಸ ವ್ಯಕ್ತಪಡಿಸಿದರು. ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸ್ಪರ್ಧೆಯನ್ನು ಮುಕ್ತಕಂಠದಿಂದ ಪ್ರಶಂಸಿದರು.
ಇತ್ತೀಚಿನ ವರ್ಷಗಳಲ್ಲಿ, ಅದರಲ್ಲಿಯೂ ಕರೊನಾ ಅವಧಿಯ ನಂತರದ ದಿನಗಳಲ್ಲಿ ಮಕ್ಕಳು ಮನೆ ಮತ್ತು ಶಾಲೆ ಹೊರತಾಗಿ ಹೊರಗಡೆ ಕಾಲಿಡುತ್ತಿಲ್ಲ. ಮೊಬೈಲ್‌ಗಳಲ್ಲಿಯೇ ಮುಳುಗಿಹೋಗಿದ್ದಾರೆ. ಕ್ರೀಡೆಗಳಲ್ಲಿಯೂ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಈ ದೃಷ್ಟಿಯಿಂದ ನೋಡುವುದಾದರೆ, ಚಿತ್ರಕಲಾ ಸ್ಪರ್ಧೆಯು ಮಕ್ಕಳಿಗೆ ಆಸಕ್ತಿದಾಯಕವಾಗಿತ್ತು. ಇದೇ ರೀತಿಯ ಮತ್ತಷ್ಟು ಚಟುವಟಿಕೆಗಳನ್ನು ಆಯೋಜಿಸುವುದು ಅಗತ್ಯವಾಗಿದೆ ಎಂದರು.
ಆತ್ಮವಿಶ್ವಾಸ, ಸ್ಪರ್ಧಾ ಮನೋಭಾವ ವೃದ್ಧಿ: ಸಹಪಾಠಿಗಳೊಂದಿಗೆ ಆಗಮಿಸಿ ಸಾವಿರಾರು ಮಕ್ಕಳೊಂದಿಗೆ ಸ್ಪರ್ಧೆ ಮಾಡಿದ್ದರಿಂದ ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧಾ ಮನೋಭಾವ ಬರಲಿದೆ. ಜತೆಗೆ ಆತ್ಮವಿಶ್ವಾಸ ಬೆಳೆಯಲಿದೆ. ಬೇರೆ ಮಕ್ಕಳೊಂದಿಗೆ ಬೆರೆಯುವ ಗುಣಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಾಲಾ ವಾತಾವರಣದಲ್ಲಿಯೇ ಇರುವ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯು ಹೊಸ ಅನುಭವ ನೀಡಿದೆ ಎಂದು ಪಾಲಕರು ‘ವಿಜಯವಾಣಿ’ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸಿದರು.
ತೀರ್ಪುಗಾರರು ಹೇಳಿದ್ದೇನು..?
ಮಕ್ಕಳು ಶಾಲೆಯಲ್ಲಿ ನೀಡುವ ಚಿತ್ರಗಳಿಗೆ ಬಣ್ಣ ತುಂಬುವ ಜತೆಗೆ ಸ್ವತಃ ಹೊಸದಾಗಿ ಚಿತ್ರ ಬರೆಯುವುದರಿಂದ ಸೃಜನಶೀಲತೆ ಹೆಚ್ಚಲಿದೆ. ಹೊಸ ಪ್ರಯತ್ನಗಳನ್ನು ಮಾಡಲು ಮುಂದಾಗಿ. ಚಿತ್ರ ಬಿಡಿಸುವುದರಿಂದ ಮನದಲ್ಲಿ ಭಾವನೆಗಳು ಮೂಡಲಿವೆ.
| ವಿ.ಆರ್.ಸಿ. ಶೇಖರ್ ಕಲಾವಿದ (ತೀರ್ಪುಗಾರ)
ಇದೊಂದು ಅದ್ಭುತ ಅನುಭವ. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾಗಶಃ ಮಕ್ಕಳು ತುಂಬ ಚೆನ್ನಾಗಿ ಚಿತ್ರಗಳನ್ನು ಬಿಡಿಸಿದ್ದಾರೆ. ಅವುಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ತೀರ್ಪುಗಾರರನ್ನಾಗಿ ಆಯ್ಕೆ ಮಾಡಿದ್ದ ‘ವಿಜಯವಾಣಿ’ಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
| ಸುನೀಲ್ ಮಿಶ್ರಾ ಕಲಾವಿದ (ತೀರ್ಪುಗಾರ)
ವ್ಯವಸ್ಥೆ ತಿದ್ದಲು ಕಲೆ ಬಳಸುವೆ
ಅಸಮರ್ಪಕ ಕುಡಿಯುವ ನೀರು, ಗುಂಡಿ ಬಿದ್ದ ರಸ್ತೆಗಳು ಸೇರಿ ಅವ್ಯವಸ್ಥೆಗಳನ್ನು ಖಂಡಿಸಿ ಜನರಿಗೆ ನ್ಯಾಯ ಕೇಳುವುದಕ್ಕಾಗಿ ನಾನು ಕಲೆಯನ್ನು ಬಳಸಿಕೊಳ್ಳುತ್ತೇನೆ ಎಂದು ಕಲಾವಿದ ಬಾದಲ್ ನಂಜುಂಡಸ್ವಾಮಿ ಹೇಳಿದ್ದಾರೆ.
‘ಚಿತ್ರಕಲಾ ಸ್ಪರ್ಧೆ’ಯಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಚಿತ್ರ ಬಿಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗುಂಡಿ ಬಿದ್ದ ರಸ್ತೆಗಳಲ್ಲಿ ಬೈಕ್ ಸವಾರರು ಬಿದ್ದು ಜೀವ ಕಳೆದುಕೊಂಡಿರುವ ಸಾಕಷ್ಟು ಉದಾಹರಣೆಗಳಿವೆ. ಇಂತಹ ರಸ್ತೆಗಳಲ್ಲಿ ವಾಹನಸವಾರರಿಗೆ ಎಚ್ಚರಿಕೆ ವಹಿಸುವುದಕ್ಕೂ ನಾನು ಯಮ, ಮೊಸಳೆಯಂತಹ ಚಿತ್ರಗಳನ್ನು ಬಿಡಿಸಿ ಅರಿವು ಮೂಡಿಸಿದ್ದೇನೆ. ರಸ್ತೆಗಳಲ್ಲಿ ಚಿತ್ರ ಬಿಡಿಸುವುದು ನನ್ನ ಹವ್ಯಾಸವಾಗಿದೆ. ಶಾಲಾ ದಿನಗಳಿಂದಲೇ ಚಿತ್ರ ಬಿಡಿಸುವ ಹವ್ಯಾಸವನ್ನು ಅಳವಡಿಸಿಕೊಂಡಿದ್ದೇನೆ ಎಂದರು.
ಅಖಿಲ ಕರ್ನಾಟಕ ಮಕ್ಕಳ ಕೂಟ ಅಧ್ಯಕ್ಷ ಕೆ. ಮೋಹನ್‌ದೇವ್ ಆಳ್ವಾ ಮಾತನಾಡಿ, ಸತತ ನಾಲ್ಕು ವರ್ಷಗಳಿಂದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವಿಭಿನ್ನ ಮತ್ತು ವಿಶೇಷವಾಗಿ ನಡೆಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತೋಷದ ಸಂಗತಿಯಾಗಿದೆ ಎಂದ ಅವರು, ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾಗಿ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಮಕ್ಕಳ ಕಣ್ಮಣಿ ಕಲ್ಯಾಣಮ್ಮ ಅವರ ದೂರದೃಷ್ಟಿಗೂ ಸಾರ್ಥಕವೆನಿಸಿದೆ ಎಂದು ಸ್ಮರಿಸಿದರು.
ಪ್ಲಾಸ್ಟಿಕ್ ಬಳಕೆ ಕಡಿತ ಮಾಡಿ: ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಡಾ. ಎ. ಪ್ರಕಾಶ್ ಮಾತನಾಡಿ, ಇಲ್ಲಿಯವರೆಗೂ ಮಣ್ಣನ್ನು ಅಗೆದರೆ ಮಣ್ಣೇ ಸಿಗುತ್ತಿದೆ. ಆದರೆ, ಇಂದಿನ ಪರಿಸ್ಥಿತಿಯನ್ನು ನೆನೆದರೆ ಮುಂದಿನ ತಲೆಮಾರಿಗೆ ಪ್ಲಾಸ್ಟಿಕ್ ಸಿಗಬಹುದೇನೋ ಎನಿಸುತ್ತಿದೆ. ಅಷ್ಟರಮಟ್ಟಿಗೆ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ. ಈ ಬಳಕೆಯು ಕ್ವಾರಿಗಳನ್ನು ಮುಚ್ಚುವುದಕ್ಕೆ ಬಳಕೆಯಾಗುತ್ತಿದೆ. ಇದು ಜೀವಹಾನಿಗೂ ಕಾರಣವಾಗುತ್ತಿದೆ. ಆದ್ದರಿಂದ ಇಲ್ಲಿರುವ ಮಕ್ಕಳು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಬಟ್ಟೆ ಬ್ಯಾಗ್‌ಗಳನ್ನು ಬಳಸುವ ಹವ್ಯಾಸ ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು. ಮಕ್ಕಳಕೂಟದ ಗೌರವ ಉಪಾಧ್ಯಕ್ಷ ಪ್ರೊ. ಕೆ.ಪಿ. ನರಸಿಂಹಮೂರ್ತಿ, ಗೌರವ ಪ್ರಧಾನ ಕಾರ್ಯದರ್ಶಿ ಎಸ್.ವಿ. ವೆಂಕಟಾಚಲಂ, ಚಾಮರಾಜಪೇಟೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಮಾಂಡರ್ ಶ್ರೀಕಾಂತ್ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.