Environmental conservation is everyone's responsibility. 
ರಾಜ್ಯ

ಪರಿಸರ ಸಂರಕ್ಷಣೆ ಎಲ್ಲರ ಜಾವಾಬ್ದಾರಿ

ತುಮಕೂರು ಡೆಸ್ಕ್
ಮಧುಗಿರಿ: ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಮರ-ಗಿಡಗಳನ್ನು ಬೆಳೆಸುವ ಮೂಲಕ ವಾತಾವರಣಕ್ಕೆ ಹಸಿರಿನ ಹೊದಿಕೆ ಹೊದಿಸಬೇಕು ಎಂದು ಶಾಸಕ ಕೆ.ಎನ್​.ರಾಜಣ್ಣ ಕರೆನೀಡಿದರು.
ಪಟ್ಟಣದ ನೇರಳೇಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಬುಧವಾರ ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಗಿಡ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಕಾಡು ಇಲ್ಲದಿದ್ದರೆ ನಾವು ಇಲ್ಲ. ವಾತಾವರಣದಲ್ಲಿ ಆಮ್ಲಜನಕದ ಕೊರತೆಯಾದರೆ ಮನುಷ್ಯರ ಜೀವ ಹೋಗುತ್ತದೆ. ಮರಗಿಡಗಳನ್ನು ಬೆಳೆಸಲು ಸರ್ಕಾರವೂ ಪ್ರೋತ್ಸಾಹ ನೀಡುತ್ತಿದ್ದು, ಜನರ ಸಹಕಾರವಿಲ್ಲದಿದ್ದರೆ ಇವುಗಳನ್ನು ಬೆಳೆಸಲು ಸಾಧ್ಯವಿಲ್ಲ ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ನೇರಳೇಕೆರೆಯಲ್ಲಿ ಎಲ್​ಕೆಜಿ, ಯುಕೆಜಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಪಾಲಕರು ಮಕ್ಕಳಿಗೆ ಜೀವ ನೀಡಿದರೆ ಜೀವನ ನೀಡುವವರು ಶಿಕ್ಷಕರು. ಸರ್ಕಾರದಿಂದ ಇಂದು ಶಿಕ್ಷಣಕ್ಕೆ ಎಲ್ಲ ಸೌಲಭ್ಯಗಳು ದೊರೆಯುತ್ತಿದ್ದು, ಮಕ್ಕಳು ಈ ಸವಲತ್ತುಗಳನ್ನು ಬಳಸಿಕೊಂಡು ಯಶಸ್ಸು ಗಳಿಸಿ ಎಂದರು.
ಬರಗಾಲಕ್ಕೆ ಯಾರೂ ಹೆದರಬೇಡಿ. ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆ ನಿರಂತರವಾಗಿ ಇರುತ್ತದೆ. ಯಾರೂ ಸಹ ಹಸಿವಿನಿಂದ ಬಳಲುವ ವಾತಾವರಣ ಇಲ್ಲ. ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದೆ. ಮೇವಿನ ಕೊರತೆಯಾದರೆ ಹೊರಭಾಗದಿಂದ ಮೇವು ತರಿಸಿ ಹಂಚಲಾಗುವುದು. ಅಗತ್ಯ ಬಿದ್ದರೆ ಗೋಶಾಲೆಗಳನ್ನು ತೆರೆಯಲಾಗುವುದು ಎಂದು ಭರವಸೆ ನೀಡಿದರು.
ವಲಯ ಅರಣ್ಯಾಧಿಕಾರಿ ಸುರೇಶ್​ ಮಾತನಾಡಿ, ತಿಮ್ಮಲಾಪುರ ಅರಣ್ಯ ಪ್ರದೇಶವನ್ನು 2016ರಲ್ಲಿ ಅಭಯಾರಣ್ಯ ಮಾಡಲು ಶಾಸಕ ರಾಜಣ್ಣ ಅವರ ಶ್ರಮ ಹೆಚ್ಚಾಗಿದ್ದು, ಇದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕಳೆದ ವರ್ಷ 65 ಸಾವಿರ ಗಿಡಗಳನ್ನು ನೆಡಲಾಗಿದ್ದು, ಶೇ.90ಕ್ಕೂ ಹೆಚ್ಚು ಗಿಡಗಳು ಬೆಳೆದು ನಿಂತಿವೆ. ಈ ವರ್ಷ 1.70 ಲಕ್ಷ ಗಿಡ ನೆಡಲಾಗಿದೆ ಎಂದು ಮಾಹಿತಿ ನೀಡಿದರು. ಕೆಪಿಸಿಸಿ ಸದಸ್ಯ ಎಂ.ಎಸ್​.ಮಲ್ಲಿಕಾರ್ಜುನಯ್ಯ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಗೋಪಾಲಯ್ಯ, ಡಿಡಿಪಿಐ ಮಾಧವರೆಡ್ಡಿ, ಬಿಇಒ ಹನುಮಂತರಾಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಂಗಪ್ಪ, ಪಿಎಲ್​ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ಕೆಂಚಪ್ಪ, ಕೆಎಂಎಫ್​ ಮಾಜಿ ನಿರ್ದೇಶಕ ಕಾಂತರಾಜು, ಸಾಹಿತಿ ನೇ.ಬ. ರಾಮಲಿಂಗ ಶೆಟ್ಟಿ, ಶಾಲೆಯ ಮುಖ್ಯಶಿಕ್ಷಕ ಮಲ್ಲಿಕಾರ್ಜುನಯ್ಯ ಮತ್ತಿತರರು ಇದ್ದರು.