ಕರ್ನಾಟಕ ಸಂಘ ಕತಾರ್ ಬೃಹತ್ ಗಿಡ ನೆಡುವ ಅಭಿಯಾನ
ದೋಹಾ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಘ ಕತಾರ್(Karnataka Sangha Qatar) ವತಿಯಿಂದ ದೋಹಾದ ಹಳೇ ಏರ್‌ಪೋರ್ಟ್ ಉದ್ಯಾನದಲ್ಲಿ ಬೃಹತ್ ಗಿಡ ನೆಡುವ ಅಭಿಯಾನ ಯಶಸ್ವಿಯಾಗಿದ್ದು, ಕಾರ್ಯಕ್ರಮದಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಜಾಗತಿಕ ಪರಿಸರ ಕಾಳಜಿ ಹಾಗೂ ಸಮುದಾಯದ ಸಹಭಾಗಿತ್ವಕ್ಕೆ ಸಾಕ್ಷಿಯಾಗಿ ಕತಾರ್‌ನ ಪುರಸಭೆ ಸಚಿವಾಲಯದ ಸಾರ್ವಜನಿಕ ಉದ್ಯಾನವನಗಳ ಇಲಾಖೆ ಹಾಗೂ ದೋಹಾ ಪುರಸಭೆ ಸಹಯೋಗದೊಂದಿಗೆ ‘ನಾವು ಪ್ರಕೃತಿಯನ್ನು ರಕ್ಷಿಸೋಣ, ಏಕೆಂದರೆ ಪ್ರಕೃತಿ ನಮ್ಮನ್ನು ರಕ್ಷಿಸಿದೆ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ರಾಜತಾಂತ್ರಿಕ ಗಣ್ಯರು, ಪುರಸಭೆ ಮುಖಂಡರು ಹಾಗೂ ಅನಿವಾಸಿ ಭಾರತೀಯ ಸಮುದಾಯದ ನೂರಾರು ಉತ್ಸಾಹಿ ಸದಸ್ಯರು ಸುಸ್ಥಿರ ನಗರಾಭಿವೃದ್ಧಿ ಮತ್ತು ಪರಿಸರ ಜಾಗೃತಿಯ ಸಂಕಲ್ಪದೊಂದಿಗೆ ಈ ಹಸಿರು ಅಭಿಯಾನದಲ್ಲಿ ಕೈಜೋಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕತಾರ್‌ನ ಭಾರತದ ರಾಯಭಾರಿ ವಿಪುಲ್ ಮತ್ತು ಭಾರತೀಯ ರಾಯಭಾರ ಕಚೇರಿಯ ಉಪ ರಾಯಭಾರಿ ಸಂದೀಪ್ ಕುಮಾರ್ ಉಪಸ್ಥಿತರಿದ್ದರು. ಕತಾರ್ ಸರ್ಕಾರದ ಪರವಾಗಿ ಸಾರ್ವಜನಿಕ ಉದ್ಯಾನವನಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಮೊಹಮ್ಮದ್ ಅಬ್ದುಲ್ಲಾ ಮೊಹಮ್ಮದ್ ಸೇರಿ ಅನೇಕ ಅಧಿಕಾರಿಗಳು ಭಾಗಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿರುವ ಭಾರತೀಯ ರಾಯಭಾರಿ ವಿಪುಲ್, ನಗರ ಪ್ರದೇಶಗಳಲ್ಲಿ ಹಸಿರನ್ನು ಪೋಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇಂತಹ ಸತ್ಕಾರ್ಯಗಳು ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರವನ್ನು ಕೊಡುಗೆಯಾಗಿ ನೀಡುವುದಲ್ಲದೆ, ಎರಡು ದೇಶಗಳ ನಡುವಿನ ಆಳವಾದ ಸ್ನೇಹ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ ಎಂದು ಹೇಳಿದ್ದಾರೆ.