ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿ ಮಟ್ಟದ ಆಂತರಿಕ ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ ಸಮಾರೋಪದಲ್ಲಿ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಡಾ.ರೋಹಿತ್​ ಕುಮಾರ್​, ಡಾ.ರಾಧಾಕಿಶೋರ್​ ಪಾಂಡುರಂಗಿ, ಸಾಯಿ ವಿಷ್ಣು ವಿಪ್ಪಗುಂಟ ಇತರರಿದ್ದರು. 
ರಾಜ್ಯ

ವಿಕಸಿತ ಭಾರತಕ್ಕೆ ಉದ್ಯಮಶೀಲತೆ ಪ್ರಮುಖ

ಪ್ರಮುಖ ಮುಖ್ಯಾಂಶಗಳು

  • ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಅಭಿಮತ
  • ಸಿಯುಕೆ ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ಗೆ ತೆರೆ
ಕಲಬುರಗಿ: ಕಠಿಣ ಪರಿಶ್ರಮ, ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಹೋಲಿಕೆ ತಪ್ಪಿಸುವುದು ಮತ್ತು ಸ್ವಯಂಶಿಸ್ತು ಯಶಸ್ಸಿನ ಐದು ಪ್ರಮುಖ ತತ್ವಗಳಾಗಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್​.ಆರ್​. ಬಿರಾದಾರ್​ ಹೇಳಿದರು.
ಕಡಗಂಚಿಯಲ್ಲಿರುವ ವಿವಿಯಲ್ಲಿ ಕಂಪ್ಯೂಟರ್​ ವಿಜ್ಞಾನ ನಿಕಾಯ ಮಂಗಳವಾರ ಆಯೋಜಿಸಿದ್ದ ವಿಶ್ವವಿದ್ಯಾಲಯ ಮಟ್ಟದ ಆಂತರಿಕ ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​-2026 ಸಮಾರೋಪದಲ್ಲಿ ಮಾತನಾಡಿದ ಅವರು, ಯಶಸ್ಸಿಗೆ ಯಾವುದೇ ಶಾರ್ಟ್​ಕಟ್​ ಇಲ್ಲ. ವಿವಿ ಸೌಲಭ್ಯ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವೈಫಲ್ಯಗಳಿಂದ ಕಲಿಯಬೇಕು ಮತ್ತು ಗುರಿಯತ್ತ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಯುವ ಶಕ್ತಿಯನ್ನೇ ನಾವೀನ್ಯದ ಶಕ್ತಿಯಾಗಿ ಪರಿವರ್ತಿಸಬೇಕು. ಯುವಜನರ ನೇತೃತ್ವದ ನಾವೀನ್ಯತೆ ಹೂಡಿಕೆ ಮತ್ತು ಉದ್ಯಮಶೀಲತೆಗೆ ಉತ್ತೇಜನ ನೀಡುವುದರ ಜತೆಗೆ 2047ರ ವಿಕಸಿತ ಭಾರತದ ಗುರಿ ಸಾಧನೆ ಸಾಕಾರಕ್ಕೆ ಪ್ರಮುಖ ಕೊಡುಗೆ ನೀಡಲಿದೆ ಎಂದರು. ಕಂಪ್ಯೂಟರ್​ ವಿಜ್ಞಾನ ನಿಕಾಯದ ಡೀನ್​ ಪ್ರೊ.ಆರ್​.ಎಸ್​. ಹೆಗಡಿ, ವಿವಿಯ ಹ್ಯಾಕಥಾನ್​ ನೋಡಲ್​ ಅಧಿಕಾರಿ ಡಾ.ರೋಹಿತ್​ ಕುಮಾರ್​ ಇತರರಿದ್ದರು.
ಆಂತರಿಕ ಹ್ಯಾಕಥಾನ್​ಗೆ ವಿವಿಯ 55 ತಂಡಗಳು ನೋಂದಾಯಿಸಿವೆ. ಕಂಪ್ಯೂಟರ್​ ವಿಜ್ಞಾನ, ಎಂಸಿಎ, ಗಣಿತ ಮತ್ತು ಕಂಪ್ಯೂಟಿಂಗ್​, ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ ಇಂಜಿನಿಯರಿಂಗ್​, ಇಲೆಕ್ಟ್ರಿಕಲ್​ ಇಂಜಿನಿಯರಿಂಗ್​, ಜೆನೆಟಿಕ್ಸ್​ ಮತ್ತು ಜೀನೋಮಿಕ್ಸ್​ ಹಾಗೂ ಸ್ಟ್ಯಟಿಸ್ಟಿಕ್ಸ್​ ಮತ್ತು ಡೇಟಾ ಅನಾಲಿಟಿಕ್ಸ್​ ವಿಭಾಗದ ಸುಮಾರು 246 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೌಲ್ಯಮಾಪನದ ಬಳಿಕ ವಿವಿಧ ಸಮಸ್ಯೆ ಹೇಳಿಕೆ ಮತ್ತು ವಿಷಯಗಳ ಆಧಾರದ ಮೇಲೆ ರಾಷ್ಟ್ರೀಯ ಮಟ್ಟದ ಸ್ಮಾರ್ಟ್​ ಇಂಡಿಯಾ ಹ್ಯಾಕಥಾನ್​ಗೆ ಅಂತಿಮವಾಗಿ 45 ತಂಡಗಳ ನಾಮನಿರ್ದೇಶನ ಮಾಡಲಾಯಿತು.
ಆಯ್ಕೆಯಾದ ತಂಡಗಳು ಸೆ.22 ಮತ್ತು 23ರಂದು ಹೈದರಾಬಾದ್​ನಲ್ಲಿ ಐಇಇಇ ಐಇಎಸ್​ ಸೊಸೈಟಿ ಆಯೋಜಿಸಿರುವ ಇಂಡಸ್ಟ್ರೀ ಇನ್ನೋವೇಷನ್​ ಕಾನ್​ಕ್ಲೇವ್​ನಲ್ಲಿ ಸಿಯುಕೆಯ ನಾವೀನ್ಯತಾ ಕೋಶದ ನೋಡಲ್​ ಅಧಿಕಾರಿ ಡಾ.ರೋಹಿತ್​ ಕುಮಾರ್​ ಮಾರ್ಗದರ್ಶನದಲ್ಲಿ ಮುಂದಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಲಿವೆ.
ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಆಂತರಿಕ ಹಾಗೂ ಬಾಹ್ಯ ತೀರ್ಪುಗಾರರು ಭಾಗವಹಿಸಿದ ತಂಡಗಳ ನವೀನ ಆಲೋಚನೆ ಮತ್ತು ಯೋಜನೆಗಳ ಮೌಲ್ಯಮಾಪನ ಮಾಡಿದರು. ನವೀನ ಪ್ರಯತ್ನಗಳಿಗಾಗಿ ವಿದ್ಯಾರ್ಥಿಗಳು ಹಾಗೂ ತಂಡಗಳನ್ನು ಅಭಿನಂದಿಸಿ ಪ್ರಮಾಣಪತ್ರ ವಿತರಿಸಲಾಯಿತು. ಬಾಹ್ಯ ತೀರ್ಪುಗಾರರಾಗಿ ಡಾ.ರಾಧಾಕಿಶೋರ್​ ಪಾಂಡುರಂಗಿ, ಸಾಯಿ ವಿಷ್ಣು ವಿಪ್ಪಗುಂಟ, ಇಂಜಿನಿಯರ್​ ಅಂಶುಮಾನ್​ ದೀತ್​ ಹಾಗೂ ಶ್ರೀಕಾಂತ್​ ಕಸಾನಿ ಭಾಗವಹಿಸಿದ್ದರು.
"

ತಂತ್ರಜ್ಞಾನ ಮತ್ತು ನಾವೀನ್ಯತೆ ಮೂಲಕ ಬಹು&ಟ್ರಿಲಿಯನ್​ ಡಾಲರ್​ ದೇಶದ ಆರ್ಥಿಕತೆಯ ನಿರ್ಮಾಣಕ್ಕೆ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಬೇಕು.