Entire family falls victim to loan harassment. 
ರಾಜ್ಯ

ಸಾಲದ ಕಿರುಕುಳಕ್ಕೆ ಇಡೀ ಕುಟುಂಬ ಬಲಿ

ಕೋಲಾರ: ಮನೆ ನಿರ್ಮಾಣಕ್ಕೆಂದು ಮಾಡಿದ್ದ ಸಾಲ ತೀರಿಸಲಾಗದೆ ತನ್ನಿಬ್ಬರು ವಯಸ್ಸಿಗೆ ಬಂದಿದ್ದ ಮಕ್ಕಳೊಂದಿಗೆ ಇತ್ತೀಚೆಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದ ಪತಿಯೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಂದಿಡೀ ಕುಟುಂಬ ಸಾವಿನ ಮನೆ ಸೇರಿ ದಾರುಣ ಅಂತ್ಯ ಕಂಡಿದೆ.
ನಗರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬೆಗ್ಲಿಬೆಣಜೇನಹಳ್ಳಿಯ ಸುರೇಶ್​ (45) ಮೃತಪಟ್ಟಿದ್ದಾರೆ. ಜು.25 ರಂದು ಸುರೇಶ್​ ಪತ್ನಿ ಪ್ರಮೀಳಾ(36), ಪುತ್ರಿ ಸ್ವಪ್ನಾ(22), ಪುತ್ರ ಚರಣ್​ (18) ಕೃಷಿಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಮನೆ ಕಟ್ಟಲು 15 ಲಕ್ಷ ಸಾಲ ಮಾಡಿದ್ದ ಹಿನ್ನೆಲೆಯಲ್ಲಿ ಪತಿಯೊಂದಿಗೆ ವಾಗ್ವಾದ ನಡೆದಿತ್ತು. ನಂತರ ತಾಯಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಮಕ್ಕಳನ್ನು ಕಳೆದುಕೊಂಡ ಸುರೇಶ್​ ಸಹ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.