ಹಾರೋಹಳ್ಳಿ ತಾಲೂಕಿನ ಲಿಂಗನಪುರ ಮತ್ತು ಕೆಬ್ಬೆದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್ ಕುಮಾರ್ ಕಂಪ್ಯೂಟರ್ ವಿತರಣೆ ಮಾಡಿದರು. ಹಾರೋಹಳ್ಳಿ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಡಾ. ರಾಕೇಶ್ ಅಗಡಿ, ವಿಸ್ತರಣಾಧಿಕಾರಿ ಪ್ರವೀಣ್ ಕುಮಾರ್, ಕೃಷಿ ಅಧಿಕಾರಿ ರಾಜಕುಮಾರ್, ಹಾಲು ಉತ್ಪಾದಕ ಸಹಕಾರ ಸಂಘದ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೊನ್ನಗಿರಿ ಗೌಡ ಹಾಗೂ ಸಂಘದ ಕಾರ್ಯದರ್ಶಿ ಅಧ್ಯಕ್ಷರು ಇತರರು ಇದ್ದರು.
ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವುದರ ಮೂಲಕ ರೈತರು ಆರ್ಥಿಕವಾಗಿ ಸಬಲರಾಗಬೇಕಿದೆ ಎಂದು ಬಮುಲ್ ನಿರ್ದೇಶಕ ಎಚ್.ಎಸ್. ಹರೀಶ್ ಕುಮಾರ್ ತಿಳಿಸಿದರು.
ತಾಲೂಕಿನ ಮರಳವಾಡಿ ಹೋಬಳಿಯ ಲಿಂಗನಪುರ ಹಾಗೂ ಹಾರೋಹಳ್ಳಿ ಹೋಬಳಿಯ ಕೆಬ್ಬೆದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಬಮುಲ್ ನಿರ್ದೇಶಕರ ನಿಧಿಯಿಂದ ಉಚಿತವಾಗಿ ಕಂಪ್ಯೂಟರ್ ವಿತರಣೆ ಮಾಡಿ ಮಾತನಾಡಿದ ಅವರು, ರೈತರ ಹಿತಕ್ಕೋಸ್ಕರ ಹಾಗೂ ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಬೆಂಗಳೂರು ಹಾಲು ಒಕ್ಕೂಟವು ಶ್ರಮಿಸುತ್ತಿದ್ದು, ರೈತರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಒಂದು ಸಂಘಕ್ಕೆ 1.26 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ವಿತರಣೆ ಮಾಡಿದ್ದು, ಎರಡು ಸಂಘಕ್ಕೆ 2.52 ಲಕ್ಷ ರೂ. ವೆಚ್ಚದಲ್ಲಿ ಕಂಪ್ಯೂಟರ್ ನೀಡಿದ್ದು, ಇದರಿಂದ ಡೈರಿಯಲ್ಲಿ ಪಾರದರ್ಶಕವಾಗಿ ರೈತರಿಗೆ ಎಲ್ಲ ಹಣಕಾಸಿನ ವ್ಯವಹಾರ ಮಾಡಲು ಸಹಕಾರಿಯಾಗಲಿದೆ ಎಂದರು.
ಒಕ್ಕೂಟದಿಂದ ರಿಯಾಯಿತಿ ದರದಲ್ಲಿ ರಬ್ಬರ್ ಮ್ಯಾಟ್, ಮಿಲ್ಕಿ ಮಿಷಿನ್, ಚಾಪ್ ಕಟ್ಟರ್ ಸೇರಿ ಹಲವು ಸಲಕರಣೆಗಳನ್ನು ರೈತರಿಗೆ ನೀಡಲಾಗುತ್ತಿದೆ. ಸಬ್ಸಿಡಿ ದರದಲ್ಲಿ ರೈತರಿಗೆ ಅನುಕೂಲವಾಗಲಿ ಎಂದು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಬೆಂಗಳೂರು ಹಾಲು ಒಕ್ಕೂಟವು ಲಾಭದಲ್ಲಿ ನಡೆಯುತ್ತಿದ್ದು, ಲಾಭಾಂಶವನ್ನು ರೈತರಿಗೆ ನೀಡಲಾಗುತ್ತಿದೆ. ಜತೆಗೆ ನೌಕರರಿಗೂ ಅನುಕೂಲ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಹಾಲನ್ನು ತರಬರಾಜು ಮಾಡುವ ಮೂಲಕ ಕೈಜೋಡಿಸಬೇಕಿದೆ ಎಂದರು.