ಕಮಲಾಪುರ ತಾಲೂಕಿನಲ್ಲಿ ಬೆಳೆ ವಿಮೆ ಪರಿಹಾರ ನೀಡುವಲ್ಲಿ ಆದ ಅನ್ಯಾಯ ಸರಿಪಡಿಸಿ, ಸಮರ್ಪಕ ಪರಿಹಾರ ನೀಡುವಂತೆ ಆಗ್ರಹಿಸಿ ಕಲಬುರಗಿಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರಿಗೆ ಶಾಸಕ ಬಸವರಾಜ ಮತ್ತಿಮಡು ಸೋಮವಾರ ಮನವಿಪತ್ರ ಸಲ್ಲಿಸಿದರು. ಶರಣಗೌಡ ಪಾಟೀಲ್, ಸತೀಶ ಪಾಟೀಲ್, ಅನೂಪ ಸಲಗರ, ನಾಗರಾಜ ಮೂಲಗೆ, ಗಜಾನನ ಅಕ್ಕಲಕೋಟ, ಸತೀಶ ಸಾಹುಕಾರ ಇತರರಿದ್ದರು.
- ರೈತರೊಂದಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ಗೆ ಶಾಸಕ ಬಸವರಾಜ ಮತ್ತಿಮಡು ಮನವಿ
ಕಲಬುರಗಿ: ಕಮಲಾಪುರ ತಾಲೂಕಿನ ಡೊಂಗರಗಾಂವ್, ವಿ.ಕೆ.ಸಲಗರ, ಲಾಡಮುಗಳಿ, ಸೋಂತ, ಓಕಳಿ, ಜೀವಣಗಿ ಹಾಗೂ ಕುರಿಕೋಟಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಮೋಸ ಆಗಿದ್ದು, ಕೂಡಲೇ ತಪ್ಪು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಆಗ್ರಹಿಸಿದರು.
ಈ ಕುರಿತು ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರಿಗೆ ಸೋಮವಾರ ರೈತರ ನಿಯೋಗದೊಂದಿಗೆ ಮನವಿಪತ್ರ ಸಲ್ಲಿಸಿ, 2025-26ನೇ ಸಾಲಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಮಲಾಪೂರ ತಾಲೂಕಿನ ಗ್ರಾಮಗಳಲ್ಲಿ ಬೆಳೆ ಕಟಾವು ಸಮೀಕ್ಷೆಯಲ್ಲಿ ಅನ್ಯಾಯ ಮಾಡಲಾಗಿದೆ. ಅತಿವೃಷ್ಟಿ, ಪ್ರವಾಹದಿಂದ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ ಎಂದು ಕೇಂದ್ರ ಅಧ್ಯಯನ ತಂಡ, ರಾಜ್ಯ ತಂಡ, ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್ ಸೇರಿ ಹಲವು ತಂಡಗಳ ವರದಿ ಹೇಳಿವೆ. ಆದರೆ ಪ್ರಸ್ತುತ ವಿಮಾ ಕಂಪನಿ, ಕೃಷಿ ಇಲಾಖೆ ಅವರು ಬೆಳೆ ಕಟಾವು ಪ್ರಕ್ರಿಯೆಯಲ್ಲಿ ಬೆಳೆ ಹಾನಿಯೇ ಆಗಿಲ್ಲ, ಶೂನ್ಯ ಹಾನಿ ಎಂದು ತೋರಿಸಿದ್ದರಿಂದ ಪರಿಹಾರ ಹಣ ಬಂದಿಲ್ಲ. ಕಟಾವಿನಲ್ಲೆ ಮಹಾಮೋಸ ಮಾಡಲಾಗಿದೆ. ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಜಿಪಂ ಮಾಜಿ ಸದಸ್ಯ ಶರಣಗೌಡ ಪಾಟೀಲ್, ಪ್ರಮುಖರಾದ ಸತೀಶ ಪಾಟೀಲ್, ಅನೂಪ ಸಲಗರ, ನಾಗರಾಜ ಮೂಲಗೆ, ಗಜಾನನ ಅಕ್ಕಲಕೋಟ, ಸತೀಶ ಸಾಹುಕಾರ ಇತರರಿದ್ದರು.