Ensure that there is no water shortage.
ಮುಳಬಾಗಿಲು: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಕ್ರಮ ಕೈಗೊಂಡು ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ್ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮಳೆ ಕೊರತೆ ಹಾಗೂ ಬರ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಅಗತ್ಯ ಪ್ರದೇಶಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಕೆಟ್ಟಿರುವ ಕೊಳವೆ ಬಾವಿಗಳಿಗೆ ಹೊಸ ಪಂಪ್ ಮೋಟಾರ್ ಅಳವಡಿಸಿ ನೀರು ಸರಬರಾಜು ಸುಧಾರಣೆಗೆ ನಿರ್ದೇಶಿಸಿದರು.
ಕುಡಿಯುವ ನೀರು ಮತ್ತು ಸ್ವಚ್ಛತೆ ವಿಷಯದಲ್ಲಿ ರ್ನಿಲಕ್ಷ$್ಯ ಸಹಿಸುವುದಿಲ್ಲ. ನಗರದಲ್ಲಿ ನೀರಿನ ಸಮಸ್ಯೆ ಇದ್ದರೂ ಮೇಲಧಿಕಾರಿಗಳಿಗೆ ಸುಳ್ಳು ವರದಿ ಸಲ್ಲಿಸುವುದು ಸರಿಯಲ್ಲ. ವಾಸ್ತವ ಸ್ಥಿತಿ ತಿಳಿಸಿದರೆ ಮಾತ್ರ ಸರ್ಕಾರದಿಂದ ಅಗತ್ಯ ಅನುದಾನ, ಪರಿಹಾರ ದೊರೆಯಲಿದೆ ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.
ಸಾರ್ವಜನಿಕರಿಂದ ಲಂಚ ಹಾಗೂ ದಲ್ಲಾಳಿಗಳ ಹಾವಳಿ ಕುರಿತು ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ, ತಾಲೂಕು ಕಚೇರಿಯಲ್ಲಿ ದೂರು ಪೆಟ್ಟಿಗೆ ಅಳವಡಿಸಿ ಪ್ರತಿ ತಿಂಗಳು ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರದ ಅಭಿವೃದ್ಧಿ ಮತ್ತು ಸಾರ್ವಜನಿಕರ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಪ್ರತಿ ವಾರ ನಗರಸಭೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದ ಅವರು, ರಸ್ತೆ, ಚರಂಡಿ, ಸ್ವಚ್ಛತೆ, ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸುವಂತೆ ಸೂಚಿಸಿದರು. ಸಿಬ್ಬಂದಿ ನಾರಾಯಣ, ಶೈಲಜಾ, ವಿ.ನಾಗರಾಜ್, ಎಚ್.ಎಸ್.ಆಂಜನೇಯರೆಡ್ಡಿ ಇದ್ದರು.