ಯಾದಗಿರಿ ಡಿಸಿ ಕಚೇರಿಯಲ್ಲಿ ಬುಧವಾರ ಕರೆದಿದ್ದ ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗುರ ಅವರು ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ಬೀಜ ಮತ್ತು ರಸಗೊಬ್ಬರ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು. ಎಸ್ಪಿ ಪೃಥ್ವಿಕ್ ಶಂಕರ್ ಇತರರಿದ್ದರು.
- ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಸೂಚನೆ
- ಜಿಲ್ಲೆಯ ಅತಿ ಸಣ್ಣ ರೈತರಿಗೂ ಸಿಗಲಿ ಸೌಲಭ್ಯ
ಯಾದಗಿರಿ: ಜಿಲ್ಲೆಯ ರೈತರಿಗೆ ಕಳಪೆ ಬೀಜ ಹಾಗೂ ರಸಗೊಬ್ಬರ ಮಾರಾಟವಾಗದಂತೆ ತೀವ್ರ ನಿಗಾ ಇರಿಸುವಂತೆ ಜಿಲ್ಲಾಧಿಕಾರಿ ರಾಹುಲ್ ತುಕರಾಮ ಪಾಂಡ್ವೆ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಬೀಜ, ರಸಗೊಬ್ಬರ, ಪರಿಕರ ಮಾರಾಟ ಉಸ್ತುವಾರಿ ಮತ್ತು ವಿಶೇಷ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು ಐದುನೂರಕ್ಕೂ ಹೆಚ್ಚು ಬೀಜ ರಸಗೊಬ್ಬರ ಅಧಿಕೃತ ಮಾರಾಟ ಅಂಗಡಿಗಳಿವೆ. ಪ್ರತಿದಿನ ಇವೆಲ್ಲವೂಗಳಿಂದ ಮಾರಾಟವಾಗುವ ಬೀಜ, ರಸಗೊಬ್ಬರಗಳ ಮಾಹಿತಿ ತಾಲೂಕುವಾರು ಪರಿಶೀಲಿಸುವಂತೆ ಅವರು ತಾಕೀತು ಮಾಡಿದರು.
ಜಿಲ್ಲೆಯ ಕಟ್ಟಕಡೆಯ ಅತೀ ಸಣ್ಣ ರೈತರಿಗೂ ಬೀಜ, ರಸಗೊಬ್ಬರ ದೊರೆಯುವಂತಾಗಬೇಕು. ಎಲ್ಲ ರೈತರಿಗೆ ಪಾರದರ್ಶಕವಾಗಿ ಸಮಾನ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ ಅನಧಿಕೃತವಾಗಿ, ಕಳಪೆ ಗುಣಮಟ್ಟದ ಬೀಜ, ರಸಗೊಬ್ಬರ ಮಾರಾಟಗಾರರ ಬಗ್ಗೆ ತೀವ್ರ ನಿಗಾ ಇರಿಸಿ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಸೂಚನೆ ನೀಡಿದರು.
ಜಮೀನುಗಳಲ್ಲಿ ಅತಿ ಹೆಚ್ಚು ಯೂರಿಯಾ ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು. ಬೀಜ ಹಾಗೂ ರಸಗೊಬ್ಬರ ವಿಷಯದಲ್ಲಿ ಅಧಿಕಾರಿಗಳು ಜಾಗೃತಿಯಿಂದ ಕಾರ್ಯನಿರ್ವಹಿಸಬೇಕುಇ. ಜಿಲ್ಲೆಯಲ್ಲಿ ಜೂನ್ ತಿಂಗಳು ಹಾಗೂ ಸಂಪೂರ್ಣ ಹಂಗಾಮು ಮುಗಿಯುವವರೆಗೆ ಬೀಜ, ರಸಗೊಬ್ಬರ ಪೂರೈಕೆ, ನಿರ್ವಹಣೆ ಕುರಿತ ಯೋಜನಾ ವರದಿ ಸಲ್ಲಿಸಬೇಕು. ಸ್ಟಾಕ್ ಇರುವ ಬಗ್ಗೆ ನಿರಂತರ ನಿರ್ವಹಣೆ ಹಾಗೂ ಮಾಹಿತಿ ಒದಗಿಸಬೇಕು ಎಂದು ಕೃಷಿ ಅಧಿಕಾರಿಗಳಿ ಸೂಚನೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ್ ಸ್ವಾಗತಿಸಿ ಅಗತ್ಯ ಮಾಹಿತಿ ನೀಡಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಸೇರಿ ಅನೇಕರು ಇದ್ದರು.