ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಅಂಧ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ ಟೂತ್ ಟೀಚರ್ ಪುಸ್ತಕದ ಬ್ರೇಲ್ ಆವೃತ್ತಿಯನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸೋಮವಾರ ಬಿಡುಗಡೆಗೊಳಿಸಿದರು. ಪ್ರೊ.ಬಿಂದು ಎಸ್.ಪಾಟೀಲ್, ಡಾ.ಪಿ.ಎಸ್.ಕಟ್ಟಿಮನಿ, ಡಾ.ಉದಯಕಿರಣ ಕೆ.ಟಿ., ಡಾ.ಜಯಂತ ಬರುವಾ ಇತರರಿದ್ದರು.
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ
- ಸಿಯುಕೆನಲ್ಲಿ ತಂತ್ರಜ್ಞಾನ ಸಂಪಾದನೆ ಕಾರ್ಯಾಗಾರ
ಕಲಬುರಗಿ: ಗ್ರಂಥಾಲಯದಲ್ಲಿ ಸ್ಥಾಪಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಬ್ರೇಲ್ ಸಂಪನ್ಮೂಲ ಕೇಂದ್ರ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು, ಸದುಪಯೋಗ ಮಾಡಿಕೊಂಡು ಜ್ಞಾನಾರ್ಜನೆ, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ, ಉನ್ನತ ಶಿಕ್ಷಣ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ(ಸಿಯುಕೆ) ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ ನೀಡಿದರು.
ಸಿಯುಕೆನಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಜ್ಞಾನವಂದನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಸಹಯೋಗದಡಿ ದೃಷ್ಟಿದೋಷ ವಿದ್ಯಾರ್ಥಿಗಳಿಗಾಗಿ ತಂತ್ರಜ್ಞಾನ ಸಹಾಯ ಮೂಲಕ ಜ್ಞಾನ ಸಂಪಾದನೆ ವಿಷಯ ಕುರಿತು ಸೋಮವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಅಂಧರಲ್ಲಿ ವಿಶಿಷ್ಟವಾದ ನೆನಪಿನ ಶಕ್ತಿ, ಕಲಿಕಾ ಸಾಮರ್ಥ್ಯ ಮತ್ತು ವಿಷಯ ಅರ್ಥ ಮಾಡಿಕೊಳ್ಳುವ ಕೌಶಲವಿರುತ್ತದೆ. ಇದನ್ನು ತಂತ್ರಜ್ಞಾನ ನೆರವಿನಿಂದ ವೃದ್ಧಿಸಿಕೊಂಡು ವಿವಿಧ ಸರ್ಕಾರಿ ಹುದ್ದೆ ಸೇರಿ ಉನ್ನತ ಮಟ್ಟದ ಅವಕಾಶ ಪಡೆಯುವತ್ತ ಗಮನಹರಿಸಬೇಕು ಎಂದರು.
ಟೂತ್ ಟೀಚರ್ ಪುಸ್ತಕದ ಬ್ರೇಲ್ ಆವೃತ್ತಿ ಹಾಗೂ ಎಂಪಿ 3 ಆಡಿಯೋ ಆವೃತ್ತಿಯನ್ನು ಸಹ ಬಿಡುಗಡೆ ಮಾಡಿದ ಪ್ರೊ.ಬಟ್ಟು, ದೃಷ್ಟಿದೋಷ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಪುಸ್ತಕವನ್ನು ಸಿಯುಕೆ ಕೇಂದ್ರ ಗ್ರಂಥಾಲಯ ಬ್ರೇಲ್ ಲಿಪಿಗೆ ಪರಿವರ್ತಿಸಿದೆಯಲ್ಲದೆ ಎಂಪಿ 3 ಆಡಿಯೋ ರೂಪದಲ್ಲೂ ಸಿದ್ಧಪಡಿಸಿದೆ ಎಂದು ತಿಳಿಸಿದರು.
ಕಲಬುರಗಿಯ ಎಸ್.ನಿಜಲಿಂಗಪ್ಪ ದಂತ ವೈದ್ಯಕಿಯ ಮತ್ತು ಸಂಶೋಧನಾ ಸಂಸ್ಥೆ ಪ್ರಾಧ್ಯಾಪಕ ಪ್ರೊ.ಬಿಂದು ಎಸ್.ಪಾಟೀಲ್ ಮಾತನಾಡಿ, ಸಹಾಯಕ ತಂತ್ರಜ್ಞಾನಗಳ ಮೂಲಕ ದೃಷ್ಟಿದೋಷ ವಿದ್ಯಾರ್ಥಿಗಳಿಗೆ ಸುಲಭವಾಗಿ ಜ್ಞಾನ ತಲುಪಿಸುವ ಇಂತಹ ಕಾರ್ಯಾಗಾರಗಳು ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ್ದಾಗಿವೆ ಎಂದು ಹೇಳಿದರು.
ಅಂಧ ವಿದ್ಯಾರ್ಥಿಗಳಿಗಾಗಿ ತಾವು ರಚಿಸಿರುವ ಟೂತ್ ಟೀಚರ್ ಪುಸ್ತಕದ ಕುರಿತು ವಿವರಿಸಿದ ಅವರು, ಹಲ್ಲುಗಳ ಆರೋಗ್ಯ, ದೈನಂದಿನ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು.
ಸಿಯುಕೆ ಕೇಂದ್ರ ಗ್ರಂಥಾಲಯ ಮುಖ್ಯಸ್ಥ ಡಾ.ಪಿ.ಎಸ್. ಕಟ್ಟಿಮನಿ ಸ್ವಾಗತಿಸಿ ಕಾರ್ಯಾಗಾರದ ಉದ್ದೇಶ ಹಾಗೂ ಬ್ರೇಲ್ ಸಂಶೋಧನಾ ಕೇಂದ್ರದ ವಿವಿಧ ಸೌಲಭ್ಯಗಳ ಕುರಿತು ತಿಳಿಸಿದರು.
ಪ್ರಾಧ್ಯಾಪಕರಾದ ಡಾ.ವಿಜಯಕುಮಾರ, ಡಾ.ರಾಮಲಿಂಗಂ, ಕೇಂದ್ರ ಗ್ರಂಥಾಲಯ ಸಿಬ್ಬಂದಿ ರಾಜೇಶ್ ದಾಸ್, ಬಸವರಾಜ ಯಾದವಾಡ, ನಿಂಗಣ್ಣ, ಪ್ರಕಾಶ್ ಎಸ್., ರಾಹುಲ್ ರಾಠೋಡ್, ಸಾಗರ ಕಡಬೆ, ಸತೀಶಕುಮಾರ, ಶಿವಕುಮಾರ, ಜ್ಞಾನವಂದನಾ ಕೇಂದ್ರದ 30ಕ್ಕೂ ಹೆಚ್ಚು ದೃಷ್ಟಿದೋಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರಾಜಕುಮಾರ ಕಲ್ಯಾಣಿ ನಿರೂಪಣೆ ಮಾಡಿದರು. ಡಾ.ಗೋಪಾಲ ದೀತ್ ವಂದಿಸಿದರು.
ಜ್ಞಾನವಂದನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ಅಧ್ಯಕ್ಷ ಅಚ್ಯುತ್ ನಾಯ್ಕ್ ಮಾತನಾಡಿದರು. ಸಿಯುಕೆ ಪ್ರಾಧ್ಯಾಪಕ ಡಾ.ಉದಯಕಿರಣ ಕೆ.ಟಿ., ಡಾ.ಜಯಂತ ಬರುವಾ ಸೇರಿ ಹಲವಾರು ಸಂಪನ್ಮೂಲ ವ್ಯಕ್ತಿಗಳು ಬ್ರೇಲ್ ಸಂಪನ್ಮೂಲ ಕೇಂದ್ರ, ಇ&ಡಿಜಿಟಲ್ ಗ್ರಂಥಾಲಯ ಸೇವೆ ಹಾಗೂ ಸಹಾಯಕ ತಂತ್ರಜ್ಞಾನ ಬಳಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಅಪರೂಪವಾಗಿರುವ ಬ್ರೇಲ್ ಸಂಪನ್ಮೂಲ ಕೇಂದ್ರ ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಸ್ಥಾಪಿಸಿರುವುದು ದೃಷ್ಟಿದೋಷ ವಿದ್ಯಾರ್ಥಿಗಳ ಸಬಲೀಕರಣದ ಮಹತ್ವದ ಹೆಜ್ಜೆ.
— > ಅಚ್ಯುತ್ ನಾಯ್ಕ್ ಅಧ್ಯಕ್ಷ, ಜ್ಞಾನವಂದನಾ ಸ್ಪರ್ಧಾತ್ಮಕ ತರಬೇತಿ ಕೇಂದ್ರ