ಬೆಳಗಾವಿ: ಚಿಕ್ಕೋಡಿ ಸಂಸದೆ ಹಾಗೂ ರಾಜ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ, ಪ್ರಿಯಾಂಕಾ ಜಾರಕಿಹೊಳಿ ಅವರ ವಿವಾಹ ನಿಶ್ಚಿತಾರ್ಥವು ಬೆಳಗಾವಿಯಲ್ಲಿ ಸರಳವಾಗಿ ನೆರವೇರಿದೆ.
ಈ ಶುಭಕಾರ್ಯವು ಸತೀಶ್ ಜಾರಕಿಹೊಳಿ ಒಡೆತನದ 'ಗೋಕಾಕ್ ಹಿಲ್ ಗಾರ್ಡನ್' ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಇನ್ನು ಪ್ರಿಯಾಂಕಾ ಅವರನ್ನು ವರಿಸಲಿರುವ ಗಂಡು, ಗೌತಮ್ ಪಾಟೀಲ್, ರಾಯಚೂರು ಜಿಲ್ಲೆ ದೇವದುರ್ಗ ಮೂಲದವರಾಗಿದ್ದು, ಇವರು ವೃತ್ತಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿದ್ದು, ವರನ ತಂದೆ ನಿವೃತ್ತ ಆರ್ಟಿಒ ಅಧಿಕಾರಿಯಾಗಿದ್ದಾರೆಂದು ತಿಳಿದುಬಂದಿದೆ.
ನಿನ್ನೆ ನಡೆದ ಕಾರ್ಯಕ್ರಮದಲ್ಲಿ, ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಕಾರ್ಯನ್ನು ಸಂಪನ್ನಗೊಳಿಸಲಾಗಿದ್ದು, ವಿವಾಹದ ದಿನಾಂಕ ಕೆಲವೇ ದಿನಗಳಲ್ಲಿ ಪ್ರಕಟಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಈ ಕುಟುಂಬದ ಪ್ರತಿಯೊಬ್ಬರು ವಿವಿಧ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡು, ಏನೇ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ, ಸತೀಶ್ ಜಾರಕಿಹೊಳಿ ಅವರ ಪುತ್ರಿ ನಿಶ್ಚಿತಾರ್ಥಕ್ಕೆ, ಸಹೋದರರಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿದ್ದರು. ಈ ಸರಳ ನಿಶ್ಚಿತಾರ್ಥದಲ್ಲಿ ಕೇವಲ ಕುಟುಂಬದವರು ಹಾಗೂ ಆಪ್ತವಲಯದ ಕೆಲವೇ ಕೆಲವು ಜನರಷ್ಟೇ ಹಾಜರಿದ್ದಾಗಿ ತಿಳಿದುಬಂದಿದೆ.
ಇನ್ನು ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, 2024 ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎಂಬ ಖ್ಯಾತಿಯನ್ನು ಗಳಿಸಿದ್ದರು. ಪ್ರಿಯಾಂಕಾಳ ಪ್ರತಿಸ್ಪರ್ಧಿಯಾಗಿ ಕಣಕ್ಕಿಳಿದಿದ್ದ ಬಿಜೆಪಿಯ ಅಣ್ಣಾ ಸಾಹೇಬ್ ಜೊಲ್ಲೆ ಅವರನ್ನು ಬರೊಬ್ಬರಿ 90 ಸಾವಿರ ಮತಗಳ ಅಂತರದಿಂದ ಪ್ರಿಯಾಂಕಾ ಪರಾಭವಗೊಳಿಸಿ, ಮೊದಲ ಚುನಾವಣೆಯಲ್ಲಿಯೇ ಜಯಭೇರಿ ಭಾರಿಸಿದ್ದರು. ಅಂತಯೇ ಲೋಕಸಭೆಯಲ್ಲಿ ಕನ್ನಡದಲ್ಲಿಯೇ ಭಾಷಣ ಮಾಡುವ ಮೂಲಕ ಖ್ಯಾತಿಯನ್ನು ಗಳಿಸಿದ್ದ ಪ್ರಿಯಾಂಕಾ, ತಮ್ಮ ಸರಳ ಹಾಗೂ ಸಂಯಮದ ಮೂಲದ ಕ್ಷೇತ್ರದ ಜನರ ವಿಶ್ವಾಸಗಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆಂದು ಹೇಳಲಾಗುತ್ತದೆ.