ಇಂಧನ ಉಳಿತಾಯ ದೇಶದ ಆರ್ಥಿಕತೆಗೆ ಬಲ economy 
ರಾಜ್ಯ

ಇಂಧನ ಉಳಿತಾಯ ದೇಶದ ಆರ್ಥಿಕತೆಗೆ ಬಲ economy

ಕೆಜಿಎಫ್:ಇಂಧನ ಬಳಕೆ ಕಡಿಮೆ ಮಾಡುವುದರಿಂದ ದೇಶದ ಆರ್ಥಿಕತೆಯ ಮೇಲೆ ಬೀಳುವ ಆರ್ಥಿಕ ಹೊರೆ ತಗ್ಗಿಸಬಹುದಾಗಿದ್ದು, ಸಾಧ್ಯವಾದಷ್ಟು ಎಲ್ಲರೂ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸುವ ಮೂಲಕ ದೇಶದ ಸಂಪತ್ತನ್ನು ಉಳಿಸಲು ಕೈ ಜೋಡಿಸಬೇಕು ಎಂದು ಮಾಜಿ ಶಾಸಕ ವೈ.ಸಂಪಂಗಿ ಹೇಳಿದರು.economy
ನಗರದಲ್ಲಿ ಎಬಿವಿಪಿ ಕಾರ್ಯಕರ್ತರು, ವಕೀಲರ ಸಂಘ ಹಾಗೂ ನಗರ ಬಿಜೆಪಿ ಘಟಕದಿಂಧ ಹಮ್ಮಿಕೊಂಡಿದ್ದ ಇಂಧನ ಉಳಿತಾಯ ಕುರಿತ ಸೈಕಲ್​ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಹೆಚ್ಚುತ್ತಿರುವ ಪೆಟ್ರೋಲ್​ ಮತ್ತು ಡೀಸೆಲ್​ ದರಗಳ ಹಿನ್ನೆಲೆಯಲ್ಲಿ ಅನಾವಶ್ಯವಾಗಿ ವಾಹನಗಳನ್ನು ಬಳಸದೇ ಮಿತವ್ಯಯ ಮಾಡಬೇಕಿದೆ ಎಂದರು.
ಸಾಧ್ಯವಾದಷ್ಟು ಸರ್ಕಾರಿ ಬಸ್​ಗಳನ್ನು ಬಳಸಬೇಕು. ಖಾಸಗಿ/ವೈಯಕ್ತಿಕ ವಾಹನಗಳಿಗೆ ಕಡಿವಾಣ ಹಾಕಿ ಅನಿವಾರ್ಯವಿದ್ದಲ್ಲಿ ಮಾತ್ರ ಸ್ವಂತ ವಾಹನಬಳಸಿ, ಇತರರೊಂದಿಗೆ ಕಾರ್​ ಪುಲ್ಲಿಂಗ್​ ಮಾಡಲು ಆದ್ಯತೆ ನೀಡಿ. ರಸ್ತೆ ಸಾರಿಗೆ ಬದಲು ರೈಲುಗಳನ್ನು ಹೆಚ್ಚು ಅವಲಂಭಿಸಬೇಕು ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್​.ಎನ್​.ರಾಜಗೋಪಾಲಗೌಡ ಮಾತನಾಡಿ, ಪೆಟ್ರೋಲ್​ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಜನರು ಪರದಾಡುವ ಸ್ಥಿತಿ ಎದುರಾಗಿದೆ. ಕೆಲವು ಸಣ್ಣ ಬದಲಾವಣೆ ಮಾಡುವುದರಿಂದ ಪೆಟ್ರೋಲ್​ ಅಥವಾ ಡೀಸೆಲ್​ ಉಳಿತಾಯ ಮಾಡುವ ಮೂಲಕ ಹಣ ಉಳಿಸಬಹುದು. ಲಾಂಗ್​ ಡೆವ್​ಗೆ ಹೋಗುತ್ತಿರಲಿ ಅಥವಾ ದೈನಂದಿನ ಪ್ರಯಾಣಕ್ಕೆ ಹೋಗುತ್ತಿರಲಿ ಸ್ಥಿರ ಮತ್ತು ಸೀಮಿತ ವೇಗದಿಂದ ಇಂಧನ ಉಳಿತಾಯ ಮಾಡಬಹುದು ಎಂದರು.
ಇಂಧನ ಬೆಲೆ ಏರಿಕೆಯ ಬಿಸಿ ಸಾರ್ವಜನಿಕರ ಮೇಲೂ ಬಿದ್ದಿದ್ದು, ರಾಜ್ಯದಲ್ಲಿ ಬಸ್​ ಟಿಕೆಟ್​ ದರಗಳು ದುಬಾರಿಯಾಗಿವೆ. ದೇಶದಲ್ಲಿ ಇಂಧನದ ಯಾವುದೇ ಕೊರತೆಯಿಲ್ಲವಾದರೂ, ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಮುಂಜಾಗ್ರತಾ ಕ್ರಮವಾಗಿ ಇಂಧನ ಉಳಿತಾಯಕ್ಕೆ ಸರ್ಕಾರ ಮನವಿ ಮಾಡಿದೆ. ಇಂಧನ ದರಗಳ ನಿಖರ ವಿವರಗಳ ಬಳಕೆಗೆ ಪ್ರಧಾನಿ ಮನವಿ ಬೆನ್ನಲ್ಲೇ ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಎಂದರು.
ನಗರದ ಗಾಂಧಿ ವೃತದಿಂದ ಪ್ರಾರಂಭವಾದ ಸೈಕಲ್​ ಜಾಥಾ ಸೂರಜ್​ಮಲ್​ ವೃತ್ತ, ಗೀತಾ ರಸ್ತೆ, ಡಾ.ರಾಜ್​ಕುಮಾರ್​ ರಸ್ತೆ, ಪ್ರಿಚರ್ಡ್​ ರಸ್ತೆ ಮೂಲಕ ಸಾಗಿ ಸಾರ್ವಜನಿಕರಿಗೆ ಇಂಧನ ಉಳಿತಾಯ ಕುರಿತು ಅರಿವು ಮೂಡಿಸಿದರು.
ನಿವೃತ್ತ ಶಿಕ್ಷಕ ಗೋವಿಂದ್​ರಾಜ್​, ನಗರಸಭೆ ಮಾಜಿ ಸದಸ್ಯೆ ವಿಜಿಕುಮಾರ್​, ಜಿಲ್ಲಾ ಬಿಜೆಪಿ ಸಂಚಾಲಕ ಸುರೇಶ್​ ನಾರಾಯಣ್​ ಕುಟ್ಟಿ ಇದ್ದರು.