ಬೆಂಗಳೂರು : ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಹಾಗೂ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಹೆಸರಿನಲ್ಲಿ ತಲಾ 3 ಲಕ್ಷ ರೂ. ಹಾಗೂ ನಾಡೋಜ ಡಾ.ಜಿ.ನಾರಾಯಣ ಅವರ ಹೆಸರಿನಲ್ಲಿ 4.25 ಲಕ್ಷ ರೂ. ಮೊತ್ತದ ದತ್ತಿ ಪ್ರಶಸ್ತಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ನಗರ ಜಿಲ್ಲಾ ಘಟಕದಲ್ಲಿ ಸ್ಥಾಪಿಸಲಾಗಿದೆ.
ಕಾವ್ಯ ಮತ್ತು ಕಾವ್ಯಮೀಮಾಂಸೆ ಕ್ಷೇತ್ರದ ಸಾಧನೆಗಾಗಿ ಜಿ.ಎಸ್.ಶಿವರುದ್ರಪ್ಪ ಹೆಸರಿನಲ್ಲಿ, ವೈಚಾರಿಕ ಮತ್ತು ವೈಜ್ಞಾನಿಕ ಕ್ಷೇತ್ರದ ಸಾಧನೆಗಾಗಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಹೆಸರಿನಲ್ಲಿ ಹಾಗೂ ಪರಿಷತ್ತಿನ ಸಮಗ್ರ ಹಿತ ಕಾಪಾಡುವ ಜಿಲ್ಲಾ ಹಾಗೂ ಗಡಿನಾಡು ಘಟಕಗಳ ಚುನಾಯಿತ ಪ್ರತಿನಿಧಿಗಳನ್ನು ಗೌರವಿಸಲು ನಾಡೋಜ ಡಾ. ಜಿ. ನಾರಾಯಣ ಅವರ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಲಾಗಿದೆ. ಈ ನಿಧಿಗಳ ಬಡ್ಡಿಯಿಂದ ನಗದು ಪುರಸ್ಕಾರ ನೀಡುವುದಾಗಿ ಕಸಾಪ ಜಿಲ್ಲಾಧ್ಯಕ್ಷ ಎಂ.ಪ್ರಕಾಶಮೂರ್ತಿ ತಿಳಿಸಿದ್ದಾರೆ.
ಜಿಲ್ಲಾ ಕಸಾಪ 5 ವರ್ಷದ ಕಾರ್ಯಚಟುವಟಿಕೆಗಳ ಅವಲೋಕನದ ಪಕ್ಷಿನೋಟ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಕುರಿತು ಮಾಹಿತಿ ನೀಡಿದರು.
ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ, ಜನಪದರು ಅಜ್ಞಾನಿಗಳಲ್ಲ. ಜ್ಞಾನ ಅನುಭವದಿಂದ ರೂಪುಗೊಳ್ಳುತ್ತದೆ. ವಿದ್ಯಾರ್ಹತೆಯೇ ಜ್ಞಾನದ ಮಾನದಂಡವಲ್ಲ. ಓದು-ಬರಹ ಬಾರದ ಜನಪದರು ಮಹಾಕಾವ್ಯಗಳನ್ನೇ ಕೊಡುಗೆಯಾಗಿ ನೀಡಿದ್ದಾರೆ. ಇಂತಹ ಸೃಜನಶೀಲ ಜನಸಮುದಾಯವನ್ನು ವಿದ್ಯಾರ್ಹತೆಯ ಮಾನದಂಡದ ಮೂಲಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದೂರವಿಡುವ ಪ್ರಯತ್ನ ಖಂಡನೀಯ ಎಂದರು.
ಕಾರ್ಯಕ್ರಮದಲ್ಲಿ ದೂರದರ್ಶನದ ಕಾರ್ಯಕ್ರಮ ನಿರ್ದೇಶಕಿ ಎಚ್.ಎನ್.ಆರತಿ, ಪಕ್ಷಿನೋಟ ಪುಸ್ತಕದ ಸಂಪಾದಕ ಡಾ.ಆರ್.ವಸಂತಕುಮಾರ್ ಮತ್ತಿತರರಿದ್ದರು.
ದತ್ತಿ ಪ್ರಶಸ್ತಿಗಳ ಕಾರ್ಯಕ್ರಮಗಳು ಪರಿಷತ್ತಿನ ಚಟುವಟಿಕೆಗಳಿಗೆ ನಿರಂತರತೆ ನೀಡಿವೆ. ಆ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲಾ ಘಟಕದ ಕಾರ್ಯ ಶ್ಲಾಘನೀಯ.ಕೆ.ಎ.ದಯಾನಂದ, ಕಸಾಪ ಆಡಳಿತಾಧಿಕಾರಿ