ಹಳೇಬೀಡು ಪಟ್ಟಣದಲ್ಲಿ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸೌಲಭ್ಯ ಪರಿಶೀಲಿಸಿದರು. ತಿಮ್ಮಣ್ಣ ಹುಲುಮನಿ, ರೂಪಾ, ವಿರೂಪಾಕ್ಷ ಇದ್ದರು.
- ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ
- ಹೊಯ್ಸಳೇಶ್ವರ ದೇಗುಲದ ಪರಿಸರ ಹಾಗೂ ಐತಿಹಾಸಿಕ ದ್ವಾರಸಮುದ್ರ ಕೆರೆ ವೀಕ್ಷಿಸಿದರು.
ಇಲ್ಲಿನ ದೇಗುಲ ಹಾಗೂ ಇತರ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಈ ಪರಿಸರದಲ್ಲಿ ಯಾವುದೇ ರೀತಿಯ ಒತ್ತುವರಿ, ನಿರ್ಮಾಣ ಕಾರ್ಯ ಮಾಡುವಂತಿಲ್ಲ. ಪ್ರಸ್ತುತ ಅಕ್ರಮ ವಹಿವಾಟುಗಳನ್ನು ನಿರ್ದಾಕ್ಷಿಣ್ಯವಾಗಿ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.
ಪಟ್ಟಣದ ಹೊಯ್ಸಳೇಶ್ವರ ದೇಗುಲದ ಪರಿಸರ ಹಾಗೂ ಐತಿಹಾಸಿಕ ದ್ವಾರಸಮುದ್ರ ಕೆರೆಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ,ವರ್ಷದಿಂದಲೂ ದೇಗುಲದ ಸುತ್ತಲಿನ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿ ಹಾಗೂ ವಹಿವಾಟುಗಳನ್ನು ನಿಲ್ಲಿಸುವಂತೆ ಸಂಬಂಧಿಸಿದ ವ್ಯಾಪಾರಿಗಳಿಗೆ ಹೇಳಲಾಗುತ್ತಿದೆ. ಗ್ರಾಮ ಪಂಚಾಯಿತಿಯಿಂದಲೂ ಅನೇಕ ಬಾರಿ ತಿಳಿವಳಿಕೆ ನೀಡಲಾಗಿದೆ. ಇಷ್ಟಾಗಿಯೂ ಗೂಡಂಗಡಿ ಹಾಗೂ ಪೆಟ್ಟಿಗೆ ಅಂಗಡಿಗಳನ್ನು ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಇರಿಸಿಕೊಳ್ಳಲಾಗಿದೆ. ಇವುಗಳ ತೆರವು ಸಂಬಂಧ ಅಂತಿಮ ಎಚ್ಚರಿಕೆ ನೀಡಲಾಗಿದ್ದು, ತಿಂಗಳ ಕಾಲಮಿತಿಯಲ್ಲಿ ಸಂಪೂರ್ಣ ಸ್ವಚ್ಛ ಪರಿಸರವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ ಎಂದರು.
ಅಕ್ರಮ ನಿರ್ಮಾಣ ಹಾಗೂ ಒತ್ತುವರಿಯಿಂದಾಗಿ ದೇಗುಲದ ಸುತ್ತಲಿನ ಚರಂಡಿಗಳು ಮುಚ್ಚಿಹೋಗಿವೆ. ಅಂಗಡಿಗಳಿಂದ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಮಾಲೀಕರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಪ್ಲಾಸ್ಟಿಕ್ ಬಳಕೆ ಮಿತಿಮೀರಿರುವುದರಿಂದ ವಾಹನ ಪಾರ್ಕಿಂಗ್‌ಸ್ಥಳ ಹಾಗೂ ದೇಗುಲದ ಸುತ್ತ ಕಸದ ರಾಶಿ ಬೀಳುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದ್ದು, ಇದಕ್ಕಾಗಿ ವಿಶೇಷ ಕಾರ್ಯಯೋಜನೆಯನ್ನು ರೂಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇಂದ್ರ ಪುರಾತತ್ವ ವಿಭಾಗದ ನಿಯಮಾನುಸಾರ ಸ್ಮಾರಕಗಳ ಸುತ್ತಲಿನ ಜಾಗವು ನಿರ್ಬಂಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ಯಾವುದೇ ಅಂಗಡಿ, ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ನಮ್ಮ ಪಾರಂಪರಿಕ ತಾಣವನ್ನು ಉಳಿಸಲು ಎಲ್ಲರೂ ಸಹಕರಿಸಬೇಕಾಗುತ್ತದೆ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರಿಗೆ ನಮ್ಮ ಜಿಲ್ಲೆಯ ಹೆಮ್ಮೆಯ ತಾಣಗಳು ಆಕರ್ಷಣೀಯವಾಗಿ ಕಾಣಬೇಕು. ಹಾಗಾಗಿ ಕೆಲ ಕಠಿಣ ಕ್ರಮಗಳು ಅನಿವಾರ್ಯ ಎಂದರು.
ಸಕಲೇಶಪುರ ಉಪ ವಿಭಾಗಾಧಿಕಾರಿ ತಿಮ್ಮಣ್ಣ ಹುಲುಮನಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ರೂಪಾ, ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಪುರಾತತ್ವ ವಿಬಾಗದ ಸಿಬ್ಬಂದಿ ಹಾಗೂ ಹಳೇನೀಡು ಗ್ರಾಪಂ ಪಿಡಿಒ ವಿರೂಪಾಕ್ಷ ಇದ್ದರು.