ಕಲಬುರಗಿ ಸಿಯುಕೆನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಡಾ.ಉದಯ್ ಕಿರಣ್ ಕೆ.ಟಿ, ಆನಂದ ದಂಡೋತಿ, ಸಿದ್ದರಾಮ ಸೀತನೂರ್, ಡಾ.ಪಿ.ಎಸ್.ಕಟ್ಟಿಮನಿ, ಪ್ರೊ.ವೆಂಕಟರಮಣ ದೊಡ್ಡಿ, ಡಾ.ದೀತ್, ಡಾ.ರಾಜ್ಕುಮಾರ್ ಕಲ್ಯಾಣಿ, ಡಾ.ಪ್ರಕಾಶ್ ಎಸ್.ಎನ್ ಇತರರಿದ್ದರು.
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
- ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ಕಾರ್ಯಾಗಾರ
ಕಲಬುರಗಿ: ಆಧುನಿಕ ತಂತ್ರಜ್ಞಾನದ ಮೂಲಕ ದೃಷ್ಟೀಹಿನರನ್ನು ಸಮಾಜದ ಮುಖ್ಯವಾಹಿನಿ ಮತ್ತು ಆರ್ಥಿಕತೆಯೊಂದಿಗೆ ಸಂಯೋಜಿಸಬೇಕಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕಲಬುರಗಿಯ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಸೆಂಟ್ರಲ್ ಲೈಬ್ರರಿ ಬುಧವಾರ ಆಯೋಜಿಸಿದ್ದ ದೃಷ್ಟಿ ಮೀರಿದ ದೃಷ್ಟಿ: ದೃಷ್ಟೀಹಿನರನ್ನು ಸಬಲೀಕರಣಗೊಳಿಸುವುದು ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ, ದೃಷ್ಟೀಹಿನ ಬಳಕೆದಾರರಿಗೆ ಪ್ರವೇಶಸಾಧ್ಯತೆ ಹೆಚ್ಚಿಸುವ ಬಹುಭಾಷಾ ಹಾರಿಜಾನ್ ಒಸಿಆರ್ ಸಾಫ್ಟ್ವೇರ್ಗೂ ಚಾಲನೆ ನೀಡಿ, ನಾವು ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಉಪಕರಣಗಳ ಉಪಯುಕ್ತತೆಯನ್ನು ಮೌಲ್ಯಮಾಪನ ಮಾಡಬೇಕು. ಮಿಷನ್ ವಿಕಸಿತ ಭಾರತದೊಂದಿಗೆ ಜೋಡಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಸಿಯುಕೆಯ ಸಂಗೀತ ವಿಭಾಗದ ಸಹಪ್ರಾಧ್ಯಾಪಕ ಡಾ.ಉದಯ್ ಕಿರಣ್ ಕೆ.ಟಿ. ಮಾತನಾಡಿ, ವಿಶ್ವವಿದ್ಯಾಲಯದ ಬ್ರೈಲ್ ಸಂಪನ್ಮೂಲ ಕೇಂದ್ರವು ದೃಷ್ಟೀಹಿನರ ಬೋಧನೆ ಮತ್ತು ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವೈಯಕ್ತಿಕವಾಗಿ ನಾನು ಕೇಂದ್ರಕ್ಕೆ ಕೊಡುಗೆ ನೀಡಲು ಬದ್ಧನಾಗಿದ್ದೇನೆ. ಲೂಯಿಸ್ ಬ್ರೈಲ್ ಮತ್ತು ಜ್ಞಾನಯೋಗಿ ಡಾ.ಪಂಡಿತ್ ಪುಟ್ಟರಾಜ್ ಗವಾಯಿ ದೃಷ್ಟೀಹಿನ ಸಮುದಾಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕಲಬುರಗಿಯ ನವ ಕಲ್ಯಾಣ ಜ್ಯೋತಿ ಜನಪರ ವೇದಿಕೆಯ ಅಧ್ಯಕ್ಷ ಸಿದ್ದರಾಮ ಸೀತನೂರ್, ಲೂಯಿಸ್ ಬ್ರೈಲ್ ಮತ್ತು ಜ್ಞಾನಯೋಗಿ ಡಾ.ಪಂಡಿತ್ ಪುಟ್ಟರಾಜ್ ಗವಾಯಿ ಅವರ ದೂರದೃಷ್ಟಿಯ ಕೆಲಸದ ಕುರಿತು ಮಾತನಾಡಿದರು.
ಕಲಬುರಗಿಯ ಗುಲ್ಬರ್ಗ ಉತ್ತರ ರೋಟರಿ ಕ್ಲಬ್ ಅಧ್ಯಕ್ಷ ಆನಂದ ದಂಡೋತಿ, ಕ್ಲಬ್ನ ಉಪಕ್ರಮಗಳ ಬಗ್ಗೆ ಚರ್ಚಿಸಿ, 20 ಜನ ದೃಷ್ಟೀಹಿನರಿಗೆ ವಾಕಿಂಗ್ ಸ್ಟಿಕ್ ವಿತರಿಸಿದರು.
ವಿಶ್ವವಿದ್ಯಾಲಯದ ಗ್ರಂಥಪಾಲಕ ಡಾ.ಪಿ.ಎಸ್.ಕಟ್ಟಿಮನಿ ಸ್ವಾಗತಿಸಿ, ಕಾರ್ಯಾಗಾರದ ಉದ್ದೇಶ ವಿವರಿಸಿದರು. ಸಿಯುಕೆಯಲ್ಲಿ ಇಬ್ಬರು ಶಾಶ್ವತ ದೃಷ್ಟೀಹಿನ ಅಧ್ಯಾಪಕ ಸದಸ್ಯರಾದ ಡಾ.ಉದಯ್ ಕಿರಣ್ ಕೆ.ಟಿ. ಮತ್ತು ಜಯಂತ್ ಬರುಹಾ ಅವರನ್ನು ನೇಮಿಸಿದ್ದಕ್ಕಾಗಿ ಕುಲಪತಿಗಳಿಗೆ ವಿಶೇಷ ಧನ್ಯವಾದ ಅರ್ಪಿಸಿದರು.
ರಾಜ್ಕುಮಾರ್ ಕಲ್ಯಾಣಿ ನಿರೂಪಿಸಿದರೆ, ಡಾ.ಪ್ರಕಾಶ್ ಎಸ್.ಎನ್. ವಂದಿಸಿದರು. ಪ್ರೊ.ವೆಂಕಟರಮಣ ದೊಡ್ಡಿ, ಡಾ.ದೀತ್, ಸಾಗರ, ಸತೀಶ, ಬಸವರಾಜ, ಶಿವಕುಮಾರ ಮತ್ತು 75 ದೃಷ್ಟೀಹಿನರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
ಕಲ್ಯಾಣ ಕರ್ನಾಟಕ ಪ್ರದೇಶದ ದೃಷ್ಟೀಹಿನ ವಿದ್ಯಾರ್ಥಿಗಳಿಗೆ ಸಿಯುಕೆ ಮುಕ್ತವಾಗಿದೆ. ವಿಶ್ವವಿದ್ಯಾಲಯದಲ್ಲಿ ಎನ್ಇಪಿ&2020 ಅನುಷ್ಠಾನದ ಮೂಲಕ ದೃಷ್ಟೀಹಿನರು ಸೇರಿ ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳಿಗೆ ಆದ್ಯತೆ ನೀಡಲಾಗಿದೆ.