ಕೊಳ್ಳೇಗಾಲ ನಗರಸಭೆ ಪೌರಾಯುಕ್ತರಿಗೆ ದ್ವಿತೀಯ ದರ್ಜೆ ಸಹಾಯಕ ಆರ್.ಪ್ರದೀಪ್ ಕುಮಾರ್ ಲಿಖಿತ ಮನವಿ ಸಲ್ಲಿಸಿದ್ದಾರೆ. 
ರಾಜ್ಯ

ಕಂದಾಯ ವಿಭಾಗದಿಂದ ಬೇರೆ ಶಾಖೆ ನಿಯೋಜನೆ ಕೋರಿದ ನೌಕರ

ಪ್ರಮುಖ ಮುಖ್ಯಾಂಶಗಳು

  • ಕಂದಾಯ ವಿಭಾಗದದಿಂದ ಕರ್ತವ್ಯದಿಂದ ಬಿಡುಗಡೆ ಮಾಡಿ
  • ಬೇರೆ ಶಾಖೆಗೆ ನಿಯೋಜಿಸಿ
ಕೊಳ್ಳೇಗಾಲ: ಕಂದಾಯ ವಿಭಾಗದದಿಂದ ಕರ್ತವ್ಯದಿಂದ ಬಿಡುಗಡೆ ಮಾಡಿ ಬೇರೆ ಶಾಖೆಗೆ ನಿಯೋಜಿಸಿ ಎಂದು ಇಲ್ಲಿನ ನಗರಸಭೆ ನೌಕರ ಪೌರಾಯುಕ್ತರಿಗೆ ಲಿಖಿತ ಮನವಿ ಪತ್ರ ಸಲ್ಲಿಸಿದ್ದಾರೆ.
ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ಆರ್.ಪ್ರದೀಪ್ ಕುಮಾರ್ ಮನವಿ ಸಲ್ಲಿಸಿರುವ ನೌಕರ.
ವಾರ್ಡ್ ಸಂಖ್ಯೆ 16 ರಿಂದ 31 ರವರೆಗಿನ ಖಾತಾ ವಿಷಯ ನಿರ್ವಾಹಕನಾಗಿ ಹಾಗೂ ಪ್ರಭಾರ ಕಂದಾಯ ನಿರೀಕ್ಷಕನಾಗಿ ಕೆಲಸ ನಿರ್ವಹಿಸಿಸುತ್ತಿದ್ದೇನೆ. ನಾನು ಕರ್ತವ್ಯ ನಿರ್ವಹಿಸುವ ವಿಭಾಗಜ್ಜೆ ಬರುವ ಕಡತ ಹಾಗೂ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಾಮಾನುಸಾರ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಈ ನಡುವೆ ಕೆಲವು ಸಾರ್ವಜನಿಕರು ಇ-ಸ್ವತ್ತು ಹಾಗೂ ಖಾತಾ ವರ್ಗಾವಣೆಗಾಗಿ ಅರ್ಜಿ ನೀಡಿದರಾದರೂ ಅದಕ್ಕೆ ಪೂರಕವಾದ ದಾಖಲೆ ನೀಡದ ಸಂದರ್ಭ ತಿಳಿವಳಿಕೆ ಹಾಗೂ ಹಿಂಬರಹವನ್ನೂ ನೀಡಿದ್ದೇನೆ.
ಆದರೆ ಕೆಲವರು ಇದನ್ನು ಅಪಾರ್ಥ ಮಾಡಿಕೊಂಡು ನನ್ನೊಂದಿಗೆ ಗಲಾಟೆ ಮಾಡುವುದರೊಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಂತಹ ಸನ್ನಿವೇಶ ನಿತ್ಯ ನಡೆಯುತ್ತಿದೆ. ಅಲ್ಲದೆ ನನ್ನ ವಿರುದ್ಧ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆಧಾರವಿಲ್ಲದ ದೂರು ನೀಡುತ್ತಿದ್ದಾರೆ. ಇನ್ನು ದೂರು ನೀಡಿರುವ ಬಗ್ಗೆ ಮಾಧ್ಯಮ ಹಾಗೂ ದಿನಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿದೆ. ಇದರಿಂದ ನನಗೆ ಮಾನಸಿಕ ನೋವು ಉಂಟಾಗಿದೆ. ಆದ್ದರಿಂದ ನಾನು ಕಂದಾಯ ವಿಭಾಗದಲ್ಲಿ ಪ್ರಸ್ತುತ ಕರ್ತವ್ಯ ಮುಂದುವರಿಸಲು ಕಷ್ಟಕರ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.