Emphasize the implementation of projects. 
ರಾಜ್ಯ

ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಿ

ತುಮಕೂರು ಡೆಸ್ಕ್
ಕೊರಟಗೆರೆ: ತಾಲೂಕಿಗೆ ಕೇಂದ್ರ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ನಿರ್ದೇಶಕಿ ಎಸ್​.ಎಂ.ರಾಜೇಶ್ವರಿ ಮತ್ತು ಆರ್ಥಿಕಾಧಿಕಾರಿ ಕೀರ್ತಿ ವಹೋರಾ ಅವರು ಬುಧವಾರ ಭೇಟಿ ನೀಡಿ, ವಿವಿಧ ಕೇಂದ್ರ ಪುರಸತ ಯೋಜನೆಗಳ ಅನುಷ್ಠಾನದ ಪ್ರಗತಿಯನ್ನು ಪರಿಶೀಲಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಗ್ರಾಮೀಣಾಭಿವೃದ್ಧಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.
ಬಳಿಕ ತಾಪಂ ಕಚೇರಿ ಮುಂಭಾಗದಲ್ಲಿರುವ ಸಂಜೀವಿನಿ ಕೆಫೆಗೆ ಭೇಟಿ ನೀಡಿ, ಕೆಫೆ ನಿರ್ವಹಿಸುತ್ತಿರುವ ಮಹಿಳಾ ಸದಸ್ಯರೊಂದಿಗೆ ಸಂವಾದ ನಡೆಸಿ, ಸ್ವಯಂ ಉದ್ಯೋಗ ಚಟುವಟಿಕೆ ಬಗ್ಗೆ ಮಾಹಿತಿ ಪಡೆದುಕೊಂಡರು.
ನಂತರ ನೀಲಗೊಂಡನಹಳ್ಳಿ ಗ್ರಾಪಂ ವ್ಯಾಪ್ತಿಯ ಎನ್​ಆರ್​ಎಲ್​ಎಂ ಸಂಜೀವಿನಿ ಘಟಕಕ್ಕೆ ಭೇಟಿ ನೀಡಿ, ಕಾವೇರಿ ಸಂಜೀವಿನಿ ಒಕ್ಕೂಟದ ಸದಸ್ಯರೊಂದಿಗೆ ಚರ್ಚೆ ನಡೆಸಿದರು. ಇರಕಸಂದ್ರ ಕಾಲನಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಿರುವ ಶಾಲಾ ಭೋಜನಾಲಯವನ್ನು ಪರಿಶೀಲಿಸಿ, ನಂತರ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ದಾಸಾಲುಕುಂಟೆ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ಸ್ತ್ರೀಶಕ್ತಿ ಸ್ವಸಹಾಯ ಸಂಘದಿಂದ ನಡೆಸಲಾಗುತ್ತಿರುವ ಸೀರೆ ಕೈಮಗ್ಗ ಘಟಕಕ್ಕೆ ಭೇಟಿ ನೀಡಿ, ಉತ್ಪಾದನಾ ಚಟುವಟಿಕೆಗಳ ಕುರಿತು ಸದಸ್ಯರೊಂದಿಗೆ ಸಂವಾದ ನಡೆಸಿದರು.
ತುಂಬಾಡಿ ಗ್ರಾಪಂ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಸ್ವಚ್ಛತಾ ಕಾರ್ಯಗಳ ಪ್ರಗತಿ ಕುರಿತು ಪರಿಶೀಲಿಸಿದರು. ಸ್ವಚ್ಛವಾಹಿನಿ ವಾಹನದ ಮಹಿಳಾ ಚಾಲಕಿಯೊಂದಿಗೆ ಸಂವಾದ ನಡೆಸಿ, ಕಾರ್ಯಪದ್ಧತಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಪಿಎಂಎವೈ ಯೋಜನೆಯಡಿ ಮಂಜೂರಾದ ವಸತಿ ಕಾಮಗಾರಿ ಪರಿಶೀಲಿಸಿ, ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು.