ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆರಂಭಿಸಿರುವ ಗೋಲ್ಡನ್ ಚಾರಿಯಟ್ ರೈಲಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶನಿವಾರ ಬೆಂಗಳೂರು ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದರು. ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಕಾರ್ಯದರ್ಶಿ ಡಾ.ರಾಮ್ ಪ್ರಸಾತ್ ಮನೋಹರ್ ಮತ್ತಿತರರಿದ್ದರು.  
ರಾಜ್ಯ

ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಒತ್ತು

ಗೋಲ್ಡನ್ ಚಾರಿಯಟ್ ರೈಲಿಗೆ ಚಾಲನೆ ನೀಡಿದ ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು : ಪ್ರವಾಸೋದ್ಯಮವನ್ನು ರಾಜ್ಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಕರ್ನಾಟಕದ ಪ್ರತಿಷ್ಠಿತ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್ 2026-27ರ ಪ್ರವಾಸಿ ಋತುವಿಗೆ ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕದಲ್ಲಿ ವನ್ಯಜೀವಿ ಸಂಪತ್ತು, ವಿಶ್ವಮಟ್ಟದ ಪರಂಪರೆ ತಾಣಗಳು, ಮಲೆನಾಡು, ಕರಾವಳಿ, ಮೈಸೂರು, ಕೊಡಗು ಸೇರಿದಂತೆ ಅಪಾರ ಪ್ರವಾಸಿ ತಾಣಗಳಿವೆ. ಈಗಿರುವ ಪ್ರಸಿದ್ಧ ತಾಣಗಳ ಜೊತೆಗೆ ಹೊಸ ಪ್ರದೇಶಗಳನ್ನೂ ಮ್ಯಾಪ್ ಮಾಡಿ ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಚಿಂತನೆ ಸರ್ಕಾರದ ಮುಂದಿದೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಅವಕಾಶಗಳೂ ಹೆಚ್ಚಲಿವೆ. ಕರ್ನಾಟಕದ ಪರಂಪರೆ ಮತ್ತು ಪ್ರವಾಸಿ ವೈವಿಧ್ಯತೆಯನ್ನು ದೇಶವಿದೇಶದ ಪ್ರವಾಸಿಗರಿಗೆ ಸಮಗ್ರವಾಗಿ ಪರಿಚಯಿಸುವ ಉದ್ದೇಶದಿಂದ ಗೋಲ್ಡನ್ ಚಾರಿಯಟ್‌ಗೆ ಹೊಸ ರೂಪ ಮತ್ತು ಹೊಸ ಪ್ರವಾಸಿ ಮಾರ್ಗಗಳನ್ನು ನೀಡಲಾಗಿದೆ ಎಂದು ಸಿಎಂ ವಿವರಿಸಿದರು.

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಪ್ರವಾಸೋದ್ಯಮ, ಐಆರ್‌ಸಿಟಿಸಿ, ಕೆಎಸ್‌ಟಿಡಿಸಿ ಮತ್ತು ರೈಲ್ವೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಐಷರಾಮಿ ಸೇವೆಯ ಸುವರ್ಣ ರಥ

ಕರ್ನಾಟಕ ದರ್ಶನದ ಪರಿಕಲ್ಪನೆಯನ್ನು ಸಮಗ್ರವಾಗಿ ಮುಂದುವರಿಸುವ ನಿಟ್ಟಿನಲ್ಲಿ ಗೋಲ್ಡನ್ ಚಾರಿಯಟ್‌ಗೆ ಹೊಸ ರೂಪ ನೀಡಲಾಗಿದೆ.ಪ್ರೈಡ್ ಆ್ ಕರ್ನಾಟಕ, ಜುವೆಲ್ಸ್ ಆ್ ಸೌತ್, ಗ್ಲಿಮ್ಸ್‌ಸ್ ಆಪ್ ಕರ್ನಾಟಕ ಎಂಬ ಯಾತ್ರಾ ಮಾರ್ಗಗಳನ್ನು ರೂಪಿಸಿ, ಪ್ರವಾಸಿಗರಿಗೆ ಐಷರಾಮಿ ಸೇವೆ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ. ತಮಿಳುನಾಡು, ಕೇರಳ, ಗೋವಾ ಸೇರಿದಂತೆ ದಕ್ಷಿಣ ಭಾರತದ ಪ್ರವಾಸೋಧ್ಯಮ ಬೆಳವಣಿಗೆಗೆ ವಿಶೇಷ ಆದ್ಯತೆ ದೊರೆಯಲಿದೆ.

ಸುವರ್ಣ ರಥ ರೈಲಿನಲ್ಲಿ ಪ್ರತ್ಯೇಕ ಡೈನಿಂಗ್ ಹಾಲ್, ಬಾರ್ ಕೌಂಟರ್, ವಿಶ್ರಾಂತಿ ಕೊಠಡಿ, ಸ್ಪಾ ಮತ್ತು ಜಿಮ್, ಸ್ಥಳೀಯ ಅನುಭವಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮೊದಲ ಟ್ರಿಪ್‌ನಲ್ಲಿ 75 ಜನ ಪ್ರವಾಸಿಗರಿದ್ದು, 60 ಸಿಬ್ಬಂದಿಗಳು ಸೇವೆ ಒದಗಿಸಲಿದ್ದಾರೆ.

ಗೋಲ್ಡನ್ ಚಾರಿಯಟ್ ರೈಲಿನಲ್ಲಿ ಬೆಂಗಳೂರಿನಿಂದ ಕೆಂಗೇರಿವರೆಗೆ ಸಂಚರಿಸಿದ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್​
ಗೋಲ್ಡನ್ ಚಾರಿಯಟ್ ಕೇವಲ ಐಷಾರಾಮಿ ರೈಲು ಯಾತ್ರೆಯಾಗಿರದೆ; ಕರ್ನಾಟಕದ ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿ ನಾಡು, ಸಂಸ್ಕೃತಿ ಮತ್ತು ಆತಿಥ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಪ್ರೀಮಿಯಂ ಪ್ರವಾಸೋದ್ಯಮ ಉತ್ಪನ್ನವಾಗಿ ರೂಪಿಸಲಾಗಿದೆ.
ಕೆ.ಜೆ.ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವ
ಐಷಾರಾಮಿ ಆತಿಥ್ಯ ಮತ್ತು ಸ್ಥಳೀಯ ಅನುಭವ ಎರಡನ್ನೂ ಜೋಡಿಸುವುದು ಗೋಲ್ಡನ್ ಚಾರಿಯಟ್‌ನ ವಿಶೇಷತೆ. ಮುಂದಿನ ಹಂತದಲ್ಲಿ ಪ್ರವಾಸಿ ಸೇವೆಗಳನ್ನು ಇನ್ನಷ್ಟು ಬಲಪಡಿಸಿ, ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರೀಮಿಯಂ ಪ್ರವಾಸ ಮಾರುಕಟ್ಟೆಯಲ್ಲಿ ಇದರ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು.
ಡಾ.ರಾಮ್ ಪ್ರಸಾತ್ ಮನೋಹರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ