Emphasis on comprehensive development of Shira city 
ರಾಜ್ಯ

ಶಿರಾ ನಗರದ ಸಮಗ್ರ ಅಭಿವೃದ್ಧಿಗೆ ಒತ್ತು

ಶಿರಾ: ಶಿರಾವನ್ನು ಸುಂದರ ನಗರವನ್ನಾಗಿಸಬೇಕೆಂಬ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ಜೀಷಾನ್ ಮೊಹಮ್ಮದ್ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಜೆಟ್‌ನ ಪೂರ್ವಭಾವಿ ಸಭೆಯಲ್ಲಿ 2026-27ನೇ ಸಾಲಿನ ಅಂದಾಜು ಆಯವ್ಯಯ ಮಂಡಿಸಿ ಮಾತನಾಡಿ, ನಗರದ ಐತಿಹಾಸಿಕ ಜಾಜಮ್ಮನ ಕಟ್ಟೆಯನ್ನು ಅಭಿವೃದ್ಧಿ ಮಾಡಲಾಗುವುದು. ನಗರಕ್ಕೆ ನೀರುಣಿಸುವ ದೊಡ್ಡ ಕೆರೆ ಅಭಿವೃದ್ಧಿ, ನಗರದ ಮುಖ್ಯ ರಸ್ತೆಗಳಲ್ಲಿ ಹೊಸ ವಿದ್ಯುತ್ ದೀಪಗಳ ಅಳವಡಿಕೆ, ನಾಗರಿಕರ ಆರೋಗ್ಯದ ದೃಷ್ಟಿಯಿಂದ ಯೋಗ ಮಂದಿರ ನಿರ್ವಾಣ, ನಗರದ ಉದ್ಯಾನವನಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಜತೆಗೆ ಚಾಲನೆ ಪರವಾನಗಿ ಪಡೆಯದ ನಾಗರಿಕರಿಗೆ ಚಾಲನಾ ಪರವಾನಗಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರಸಭೆಗೆ ವಿವಿಧ ಮೂಲಗಳಿಂದ 54.50 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದ್ದು, ನಿರೀಕ್ಷಿಸಲಾದ ಒಟ್ಟು ಪಾವತಿಗಳು 52.18 ಕೋಟಿ ರೂಪಾಯಿ. ನಗರಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ 1.80 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದರು.
ಕಳೆದ ವರ್ಷದ ಬಜೆಟ್‌ನಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗಾಗಿ 30 ಲಕ್ಷ ರೂ. ಮೀಸಲಿಡಲಾಗಿತ್ತು. ಆದರೆ ಈವರೆಗೂ ನಗರದಲ್ಲಿ ಎಲ್ಲಿಯೂ ಏಕೆ ಸಿಸಿ ಕ್ಯಾಮರಾ ಅಳವಡಿಸಿಲ್ಲ ಎಂದು ನಗರಸಭೆ ಸದಸ್ಯೆ ಉವಾ ವಿಜಯರಾಜ್ ಪ್ರಶ್ನೆಗೆ ಉತ್ತರಿಸಿದ ಅಧ್ಯಕ್ಷರು ಸಿಸಿ ಕ್ಯಾಮರಾ ಅಳವಡಿಕೆ ಕಾರ್ಯ ನಡೆಯುತ್ತಿರುವುದಾಗಿ ತಿಳಿಸಿದರು.
ನಗರದ ಯಾವ ವಾರ್ಡಿನಲ್ಲೂ ಸ್ವಚ್ಛತೆಗೆ ಗಮನಹರಿಸುತ್ತಿಲ್ಲ ಎಂದು ನಗರಸಭೆ ಸದಸ್ಯ ರಂಗರಾಜು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಯರು ಎಲ್ಲ ವಾರ್ಡ್‌ಗಳಲ್ಲೂ ಕಡೆ ಸ್ವಚ್ಛತೆ ಕಾರ್ಯನಡೆಯುತ್ತಿದೆ ಎಂದು ಸಮರ್ಥಿಸಿಕೊಂಡರು.
ಸದಸ್ಯ ಅಜಯ್ ಕುವಾರ್ ವಾತನಾಡಿದರು. ನಗರಸಭೆ ಉಪಾಧ್ಯಕ್ಷ ಲಕ್ಷ್ಮೀಕಾಂತ್, ಆಯುಕ್ತ ಆರ್.ರುದ್ರೇಶ್, ಲೆಕ್ಕಿಗ ಎನ್.ತೇಜಸ್ವಿನಿ, ನಗರಸಭೆ ಸದಸ್ಯರು ಇದ್ದರು.