Embrace the ideals of your parents. 
ರಾಜ್ಯ

ಪಾಲಕರ ಆದರ್ಶ ಮೈಗೂಡಿಸಿಕೊಳ್ಳಿ

parents ಕೊರಟಗೆರೆ: ತಂದೆ&ತಾಯಿಗಳ ಆಸ್ತಿಗೆ ಮಾತ್ರ ವಾರಸುದಾರರಾಗಬೇಡಿ. ಅವರು ಬದುಕಿನಲ್ಲಿ ಅನುಸರಿಸಿದ ಆದರ್ಶ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಮುಂದುವರಿಸಿಕೊಂಡು ಹೋಗುವುದು ಮಕ್ಕಳ ಕರ್ತವ್ಯ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಮಧೇನು ಕನ್ವೆನ್ಷನ್​ ಹಾಲ್​ನಲ್ಲಿ ಜಗ್ಗೇಶ್​ ಅಭಿಮಾನಿಗಳ ಬಳಗ ಮತ್ತು ಫ್ರೆಂಡ್ಸ್​ ಗ್ರೂಪ್​ ಸೇವಾ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಸಾಧಕರಿಗೆ ಅಭಿನಂದನಾ ಸಮಾರಂಭ ಹಾಗೂ ಕನ್ನಡ ರಾಜ್ಯೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸಾಧನೆ ಎಂಬುದು ಒಬ್ಬ ವ್ಯಕ್ತಿಯ ಪ್ರಯತ್ನ ಮಾತ್ರವಲ್ಲ, ಅನೇಕ ಮಂದಿಯ ಸಹಕಾರದ ಫಲ. ನಾನೊಬ್ಬನೇ ಸಾಧಿಸಿದ್ದೇನೆ ಎನ್ನುವುದಕ್ಕಿಂತ ಎಲ್ಲರ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು ಎನ್ನುವ ಮನೋಭಾವವೇ ನಿಜವಾದ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ತಹಸೀಲ್ದಾರ್​ ಮಂಜುನಾಥ್​ ಮಾತನಾಡಿ, ಸಮಾಜದಲ್ಲಿ ಸದಾ ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿರಬೇಕು. ಸಂಘ&ಸಂಸ್ಥೆಗಳು ಇಂತಹ ಕಾರ್ಯಗಳಿಗೆ ಪೂರಕವಾಗಿ ಕೆಲಸ ಮಾಡಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿ, ಪಟ್ಟಣದ ಇತಿಹಾಸ ಪ್ರಸಿದ್ಧ ಗಂಗಾಧರೇಶ್ವರ ದೇವಾಲಯದ ಜೀಣೋರ್ದ್ಧಾರಕ್ಕೆ ತಾಲೂಕು ಆಡಳಿತದಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಲ್​ ಇನ್​ಸ್ಪೆಕ್ಟರ್​ ಅನಿಲ್​ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಅನಾವಶ್ಯಕ ವ್ಯಾಜ್ಯಗಳು ಹೆಚ್ಚಾಗುತ್ತಿರುವುದು ಆತಂಕಕಾರಿ. ಸಮಾಜಮುಖಿ ಸಂಘಟನೆಗಳು ಹಾಗೂ ಧಾರ್ಮಿಕ ಗುರುಗಳು ಜನರಲ್ಲಿ ಮನಪರಿವರ್ತನೆ ಮಾಡಿ, ವ್ಯಾಜ್ಯಮುಕ್ತ ಗ್ರಾಮಗಳ ನಿಮಾರ್ಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಪಿಎಸ್​ಐ ತೀರ್ಥೇಶ್​, ಫ್ರೆಂಡ್ಸ್​ ಗ್ರೂಪ್​ ಸೇವಾ ಸಮಿತಿಯ ಅಧ್ಯಕ್ಷ ಕೆ.ಎನ್​.ರವಿಕುಮಾರ್​, ಜಗ್ಗೇಶ್​ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಡಿ.ಎಲ್​.ಮಲ್ಲಯ್ಯ, ಹಂಚಿಹಳ್ಳಿ ಗ್ರಾಪಂ ಅಧ್ಯಕ್ಷ ಭೀಮರಾಜು, ಪಪಂ ಮಾಜಿ ಸದಸ್ಯ ಕೆ.ಬಿ.ಮಂಜುನಾಥ್​, ಪಿಡಿಒ ರಾಘವೇಂದ್ರ, ಮುಖಂಡರಾದ ಕಾರ್​ ಮಹೇಶ್​, ಶಂಕರ್​, ಸೋಮ, ಪ್ರದಿಪ್​ ಮತ್ತಿತರರು ಇದ್ದರು.