ಕಲಬುರಗಿ ಜೆಸ್ಕಾಂ ಅಳವಡಿಸಲು ಉದ್ದೇಶಿಸಿರುವ ಸ್ಮಾರ್ಟ್​ ಮೀಟರ್​ಗಳ ಒಂದು ನೋಟ 
ರಾಜ್ಯ

ಮೀಟರ್​ನಿಂದ ವಿದ್ಯುತ್​ ಸೇವೆ ಮತ್ತಷ್ಟೂ ಸ್ಮಾರ್ಟ್​

ಪ್ರಮುಖ ಮುಖ್ಯಾಂಶಗಳು

  • ಮೂರು ಜಿಲ್ಲೆಗಳಲ್ಲಿ ಮೀಟರ್​ ಟೆಸ್ಟಿಂಗ್​ ಲ್ಯಾಬ್​
  • ಗುಣಮಟ್ಟದ ವಿದ್ಯುತ್​ ನಿರ್ವಹಣೆ ಉದ್ದೇಶ
ಕಲಬುರಗಿ: ವಿದ್ಯುತ್​ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಗ್ರಾಹಕರಿಗೆ ಪಾರದರ್ಶಕ, ನಿಖರ ಹಾಗೂ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಸ್ಮಾರ್ಟ್​ ಮೀಟರ್​ ವ್ಯವಸ್ಥೆ ಪ್ರಮುಖ ಹೆಜ್ಜೆಯಾಗಿದೆ.
ಸಾಂಪ್ರದಾಯಿಕ ವಿದ್ಯುತ್​ ಮೀಟರ್​ಗಳಿಗೆ ಹೋಲಿಸಿದರೆ ಸ್ಮಾರ್ಟ್​ ಮೀಟರ್​ಗಳು ಹೆಚ್ಚು ಆಧುನಿಕವಾಗಿದ್ದು, ವಿದ್ಯುತ್​ ಬಳಕೆಯ ಮಾಹಿತಿಯನ್ನು ತ್ವರಿತವಾಗಿ ದಾಖಲಿಸಿ ಸಂಸ್ಥೆಗೆ ರವಾನಿಸುವ ಸಾಮರ್ಥ್ಯ ಹೊಂದಿವೆ. ಸ್ಮಾರ್ಟ್​ ಮೀಟರ್​ ವಿದ್ಯುತ್​ ಬಳಕೆಯ ಮಾಹಿತಿ ಸ್ವಯಂಚಾಲಿತವಾಗಿ ವಿದ್ಯುತ್​ ಸಂಸ್ಥೆಗೆ ತಲುಪುತ್ತದೆ. ಇದರಿಂದ ನಿಖರ ಬಿಲ್ಲಿಂಗ್​, ಪಾರದರ್ಶಕತೆ ಹಾಗೂ ವೇಗವಾದ ಸೇವೆ ಸಾಧ್ಯವಾಗುತ್ತದೆ. ಮೀಟರ್​ ರೀಡರ್​ ಮನೆಗೆ ಬರಬೇಕಾದ ಅಗತ್ಯವೂ ಕಡಿಮೆಯಾಗುತ್ತದೆ.
ಪ್ರಸ್ತುತ ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 8,185 ಗ್ರಾಹಕರು ಸ್ಮಾರ್ಟ್​ ಮೀಟರ್​ಗಳನ್ನು ಅಳವಡಿಸಿಕೊಂಡಿದ್ದಾರೆ. ಇವರಲ್ಲಿ ತಾತ್ಕಾಲಿಕ ವಿದ್ಯುತ್​ ಸಂಪರ್ಕಕ್ಕಾಗಿ 3,019 ಗ್ರಾಹಕರು ಸ್ಮಾರ್ಟ್​ ಮೀಟರ್​ ಬಳಕೆ ಮಾಡುತ್ತಿದ್ದು, 40 ಗ್ರಾಹಕರು ಪ್ರಿಪೇಡ್​ ಹಾಗೂ 5,126 ಗ್ರಾಹಕರು ಪೋಸ್ಟ್​ಪೇಡ್​ ಸ್ಮಾರ್ಟ್​ ಮೀಟರ್​ ಅಳವಡಿಸಿಕೊಂಡಿದ್ದಾರೆ.
ಕಲಬುರಗಿ ಜೆಸ್ಕಾಂ ಅಳವಡಿಸಲು ಉದ್ದೇಶಿಸಿರುವ ಸ್ಮಾರ್ಟ್​ ಮೀಟರ್​ ಟೆಸ್ಟಿಂಗ್​ ಲ್ಯಾಬ್​ ದೃಶ್ಯ.
ಸ್ಮಾರ್ಟ್​ ಮೀಟರ್​ ದರನಿಗದಿ
ಸ್ಮಾರ್ಟ್​ ಮೀಟರ್​ಗಳ ದರ ಸಿಂಗಲ್​ ಫೇಸ್​ಗೆ (ಬಾಕ್ಸ್​ ಸಹಿತ) 4,983 ರೂ., ತ್ರಿಫೇಸ್​ಗೆ (ಬಾಕ್ಸ್​ ಸಹಿತ) 8,800 ರೂ. ಹಾಗೂ ತ್ರಿಫೇಸ್​ ಸಿ.ಟಿ. ಆಪರೇಟೆಡ್​ ಸ್ಮಾರ್ಟ್​ ಮೀಟರ್​ಗೆ (ಬಾಕ್ಸ್​ ಸಹಿತ) 27,500 ರೂ. (ಜಿಎಸ್​ಟಿ ಸೇರಿ) ನಿಗದಿಯಾಗಿದೆ. ಗ್ರಾಹಕರಿಗೆ ಪ್ರಿಪೇಡ್​ ಅಥವಾ ಪೋಸ್ಟ್​ಪೇಡ್​ ಆಯ್ಕೆ ನೀಡಲಾಗಿದೆ. ಆದರೆ ತಾತ್ಕಾಲಿಕ ವಿದ್ಯುತ್​ ಸಂಪರ್ಕಗಳಿಗೆ ಸ್ಮಾರ್ಟ್​ ಮೀಟರ್​ ಅಳವಡಿಕೆ ಕಡ್ಡಾಯವಾಗಿದೆ.
ಸ್ಮಾರ್ಟ್​ ಮೀಟರ್​ಗಳು ವಿದ್ಯುತ್​ ಕ್ಷೇತ್ರದಲ್ಲಿ ಮಹತ್ವದ ತಾಂತ್ರಿಕ ಪರಿವರ್ತನೆಯಾಗಿವೆ. ಗ್ರಾಹಕರಿಗೆ ನಿಖರ ಬಿಲ್ಲಿಂಗ್​, ಪಾರದರ್ಶಕ ಸೇವೆ ಹಾಗೂ ಗುಣಮಟ್ಟದ ವಿದ್ಯುತ್​ ನಿರ್ವಹಣೆ ಒದಗಿಸುವುದು ಇದರ ಪ್ರಮುಖ ಉದ್ದೇಶ.
ಸ್ಮಾರ್ಟ್​ ಮೀಟರ್​ ಟೆಸ್ಟಿಂಗ್​ ಲ್ಯಾಬ್​
ಸ್ಮಾರ್ಟ್​ ಮೀಟರ್​ಗಳ ಕಾರ್ಯಮತೆ, ನಿಖರತೆ ಹಾಗೂ ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರೀಕ್ಷಿಸಲು ಜೆಸ್ಕಾಂ ಅತ್ಯಾಧುನಿಕ ಸ್ಮಾರ್ಟ್​ ಮೀಟರ್​ ಟೆಸ್ಟಿಂಗ್​ ಲ್ಯಾಬ್​ಗಳನ್ನು ಸ್ಥಾಪಿಸಿದೆ. ಇದರಿಂದ ಮೀಟರ್​ಗೆ ಸಂಬಂಧಿಸಿದ ಗ್ರಾಹಕರ ಅನುಮಾನಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ಶೀಘ್ರ ಪರಿಹರಿಸಲು ಸಾಧ್ಯವಾಗಲಿದೆ.
ಪ್ರಸ್ತುತ ಕಲಬುರಗಿ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಈ ಟೆಸ್ಟಿಂಗ್​ ಲ್ಯಾಬ್​ಗಳು ಕಾರ್ಯನಿರ್ವಹಿಸುತ್ತಿವೆ. ಮೀಟರ್​ ಪರೀಕ್ಷೆ ಮಾಡಿಸಿಕೊಳ್ಳಲು ಬಯಸುವ ಗ್ರಾಹಕರು ಸಂಬಂಧಿಸಿದ ಜೆಸ್ಕಾಂ ಉಪವಿಭಾಗದಲ್ಲಿ ಸಿಂಗಲ್​ ಫೇಸ್​ ಮೀಟರ್​ಗೆ 100 ರೂ. ಹಾಗೂ ತ್ರಿಫೇಸ್​ ಮೀಟರ್​ಗೆ 200 ರೂ. ಶುಲ್ಕ ಪಾವತಿಸಿ, ತಮ್ಮ ಮೀಟರ್​ ಅನ್ನು ಟೆಸ್ಟಿಂಗ್​ ಲ್ಯಾಬ್​ಗೆ ಕೊಂಡೊಯ್ದು ಪರೀಕ್ಷೆ ಮಾಡಿಸಿಕೊಳ್ಳಬಹುದು ಎಂದು ಜೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"


ಸ್ಮಾರ್ಟ್​ ಮೀಟರ್​ ಅಳವಡಿಕೆಯಿಂದ ವಿದ್ಯುತ್​ ಉಳಿತಾಯಕ್ಕೂ ಉತ್ತೇಜನ ದೊರೆಯಲಿದ್ದು, ವಿದ್ಯುತ್​ ಸಂಸ್ಥೆಯ ಕಾರ್ಯಮತೆ ಹೆಚ್ಚುವುದರ ಜತೆಗೆ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ತಗ್ಗಿಸಲು ಸಹಕಾರಿಯಾಗಲಿದೆ. ಸ್ಮಾರ್ಟ್​ ಮೀಟರ್​ ಕುರಿತು ಹರಿದಾಡುತ್ತಿರುವ ತಪ್ಪು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡದೆ, ಜೆಸ್ಕಾಂನ ಅಧಿಕೃತ ಮಾಹಿತಿ ಅನುಸರಿಸಿ.

— ಶಶಿಧರ ಕುರೇರ, ವ್ಯವಸ್ಥಾಪಕ ನಿರ್ದೇಶಕರು, ಜೆಸ್ಕಾಂ, ಕಲಬುರಗಿ