ಕೆಂಭಾವಿ ಸಮೀಪ ಜೇವರ್ಗಿ ಶಾಖಾ ಕಾಲುವೆ ಬಳಿ ಅಳವಡಿಸಿದ್ದ ಬೆಲೆಬಾಳುವ ವಿದ್ಯುತ್ ಮೋಟಾರ್ ಕೇಬಲ್ ಕಳ್ಳತನವಾದ ಬಗ್ಗೆ ರೈತ ಸಿದ್ದು ದೇವಿಕೇರಿ ತೋರಿಸುತ್ತಿರುವುದು.
ಕೆಂಭಾವಿ: ಪಟ್ಟಣ ಸೇರಿ ವಲಯದ ಹಲವೆಡೆ ಮಳೆಗಾಲ ಆರಂಭವಾಗಿ ಮಳೆ ಬಾರದೆ ರೈತರು ಕಂಗಾಲಾಗಿದ್ದು ಇದರ ಬೆನ್ನಲ್ಲೆ ರೈತರ ಪಂಪ್ಸೆಟ್ ಅಳವಡಿಸಿದ ಬೆಲೆಬಾಳುವ ಮೋಟಾರ್ ಮತ್ತು ಕೇಬಲ್ ಕಳವು ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ನಾರಾಯಣಪುರ ಎಡದಂಡೆ ಕಾಲುವೆ ಸೇರಿ ಇಲ್ಲಿಂದ ಭಾಗವಾಗಿರುವ ಐಬಿಸಿ, ಎಸ್ಬಿಸಿ ಕಾಲುವೆಗಳ ಪಕ್ಕ ಮತ್ತು ತಮ್ಮ ಜಮೀನುಗಳ ಬಾವಿಗಳಲ್ಲಿ ಅಳವಡಿಸಿರುವ ಪಂಪ್ಸೆಟ್ನ ಮುಖ್ಯ ಕೇಬಲ್ ಕಳುವು ಮಾಡುವ ಮೂಲಕ ಮಂಗಳವಾರ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ.
ಬೆಲೆ ಬಾಳುವ ತಾಮ್ರ ತಂತಿಯ ಆಸೆಗೆ ಬಿದ್ದಿರುವ ಕಳ್ಳರು ನೆಲದಲ್ಲಿ ತೋಡಿ ಅಳವಡಿಸಿರುವ ಕೇಬಲ್ ಕಳುವು ಮಾಡಿದ್ದಾರೆ. ಒಂದೆರಾತ್ರಿ ಸುಮಾರು 10 ಕಿಮೀ ವರೆಗಿನ ಸುಮಾರು 20ಕ್ಕೂ ಹೆಚ್ಚು ವಿದ್ಯುತ್ ಯಂತ್ರದ ಕೇಬಲ್ ಕಳವು ಮಾಡಲಾಗಿದೆ. ಈ ಕುರಿತು ಪೊಲೀಸ್ ಇಲಾಖೆಗೆ ಮೌಖಿಕವಾಗಿ ದೂರು ನೀಡಲಾಗಿದೆ ಎಂದು ರೈತರು ತಿಳಿಸಿದ್ದಾರೆ.
ಪ್ರತಿವರ್ಷ ನಡೆಯುವ ಈ ಕಳ್ಳತನ ದಂಧೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಬೇಕಿದ್ದು, ಮುಂಗಾರು ಕೈಕೊಟ್ಟಿರುವಾಗಲೇ ಅಲ್ಪ ನೀರು ಬಳಕೆಮಾಡಿಕೊಂಡು ಹತ್ತಿ ತೊಗರಿ ಬೆಳೆ ಬೆಳೆಯುವ ರೈತರಿಗೆ ಇಂಥ ಕಳ್ಳರ ಕಾಟ ಈಗ ಹೆಚ್ಚಾಗಿದೆ. ಹೀಗಾಗಿ ಕೂಡಲೇ ವಿಶೇಷ ತಂಡ ರಚಿಸಿ ಕಳ್ಳರನ್ನು ಮಟ್ಟ ಹಾಕುವಂತೆ ಈ ಭಾಗದ ಅನೇಕ ರೈತರು ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.