ತಹಸೀಲ್ದಾರ್ ಕಚೇರಿಯಲ್ಲಿ ಮಂಗಳವಾರ ವಿದ್ಯುತ್ ವ್ಯತ್ಯಯದಿಂದ ವೃದ್ಧರು, ಅಂಗವಿಕಲರು ಕಚೇರಿಯಲ್ಲಿ ಕಾಯುತ್ತ ಕುಳಿತಿರುವುದು. 
ರಾಜ್ಯ

ತಹಸೀಲ್ದಾರ್ ಕಚೇರಿಗೆ ವಿದ್ಯುತ್ ಶಾಕ್

ಬೆಳಗಾವಿ: ತಹಸೀಲ್ದಾರ್ ಕಚೇರಿಯಲ್ಲಿ ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರು ಮಂಗಳವಾರ ದಿನವಿಡೀ ಕಾಯುವಂತಾಯಿತು. ಬೆಳಗ್ಗೆ ಕಚೇರಿಗೆ ಆಗಮಿಸಿದ ಜನರಿಗೆ, ವಿದ್ಯುತ್ ಇಲ್ಲದ್ದರಿಂದ ಮರಳಿ ತೆರಳುವಂತೆ ತಿಳಿಸಿದ್ದಾರೆ.
ಇದರಿಂದ ಪಿಂಚಣಿ ಅರ್ಜಿ ಪರಿಶೀಲನೆಗಾಗಿ ಆಗಮಿಸಿದ್ದ ವೃದ್ಧರು, ಅಂಗವಿಕಲರು ಆಕ್ರೋಶ ವ್ಯಕ್ತಪಡಿಸಿದರು. ಮೂರು ತಿಂಗಳಿನಿಂದ ವೃದ್ಧಾಪ್ಯ ಪಿಂಚಣಿ ಜಮೆ ಆಗುತ್ತಿಲ್ಲ. ಈ ಬಗ್ಗೆ ವಿಚಾರಿಸಿದರೆ ವಿದ್ಯುತ್ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ತಹಸೀಲ್ದಾರ್ ಹನುಮಂತ ಶಿರಹಟ್ಟಿ ಮಾತನಾಡಿ, ಹೆಸ್ಕಾಂ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಶೀಘ್ರ ಸಮಸ್ಯೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.