- ಸಚಿವ ಪ್ರಿಯಾಂಕ್ ಖರ್ಗೆ ಎಂಟ್ರಿ ಸಾಧ್ಯತೆ
- ಕಾಂಗ್ರೆಸ್ನಲ್ಲಿ ಗರಿಗೆದರಿದ ಚಟುವಟಿಕೆ
ಕಲಬುರಗಿ: ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಗೆ ಶನಿವಾರ ಮುಹೂರ್ತ ಫಿಕ್ಸ್ ಆಗಿದೆ. ಮೇಯರ್ ಸ್ಥಾನ ಬಿಸಿಎ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ (ಮಹಿಳೆ) ಮೀಸಲಾಗಿದ್ದು, ಕಾಂಗ್ರೆಸ್ ವಲಯದಲ್ಲಿ ಪ್ರಕ್ರಿಯೆ ಚುರುಕುಗೊಂಡಿದೆ. ಸಚಿವರು, ಶಾಸಕರು, ಪ್ರಮುಖ ಪದಾಧಿಕಾರಿಗಳು ಶುಕ್ರವಾರ ಸಭೆ ನಡೆಸಿದ್ದು, ಶನಿವಾರ ಬೆಳಗ್ಗೆ ಒಟ್ಟಾರೆ ಚಿತ್ರಣ ಸ್ಪಷ್ಟವಾಗಲಿದೆ.
ಮೀಸಲು ನಿಗದಿಯಾಗುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ವಲಯದಲ್ಲಿ ಲೆಕ್ಕಾಚಾರ ಗರಿಗೆದರಿದೆ. ಆದರೆ ಆಡಳಿತಾರೂಢ ಕಾಂಗ್ರೆಸ್ ಬಹುಮತದ ಸಂಖ್ಯಾಬಲ ಹೊಂದಿದ್ದರಿಂದ ತಲೆಬಿಸಿ ಕಡಿಮೆ. ಆದರೆ ಪೈಪೋಟಿಯಂತೂ ನಡೆದಿದೆ.
ಆರೋಗ್ಯ, ಶಿಕ್ಷಣ, ಹಣಕಾಸು ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಿಗದಿಯಾಗಿದೆ. ಇಂದಿರಾ ಸ್ಮಾರಕ ಭವನದಲ್ಲಿ ಶನಿವಾರ ಮಧ್ಯಾಹ್ನ 3.30ಕ್ಕೆ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಅಪರ ಜಿಲ್ಲಾಧಿಕಾರಿಗಳಿಗೆ ಬೆಳಗ್ಗೆ 10ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಶುರುವಾಗಲಿದ್ದು, ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಲಾಗಿದೆ.
ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಕಲಬುರಗಿ ಪಾಲಿಕೆಯಲ್ಲೂ ಬಹುಮತಕ್ಕೆ ಬೇಕಿದ್ದ ಅಗತ್ಯ ಸಂಖ್ಯಾಬಲ ಹೊಂದಿದೆ. 28 ಪಕ್ಷದ ಸದಸ್ಯರ ಜತೆ ಸಂಸದ ರಾಧಾಕೃಷ್ಣ ದೊಡ್ಡಮನಿ, ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ್, ತಿಪ್ಪಣ್ಣಪ್ಪ ಕಮಕನೂರ, ಡಾ.ಚಂದ್ರಶೇಖರ ಪಾಟೀಲ್ ಹುಮನಾಬಾದ್ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹೀಗಾಗಿ ಕಾಂಗ್ರೆಸ್ ಒಟ್ಟು ಸಂಖ್ಯಾಬಲ 35ಕ್ಕೆ ಏರಿಕೆಯಾಗಲಿದೆ.
ಇನ್ನು ಬಿಜೆಪಿ 22 ಪ್ಲಸ್ 1 ಸೇರಿ 23 ಸಂಖ್ಯಾಬಲ ಹೊಂದಿದೆ. ಜತೆಗೆ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಶಶೀಲ್ ನಮೋಶಿ ಮತ್ತು ಶಾಸಕ ಬಸವರಾಜ ಮತ್ತಿಮಡು ಮತದಾನ ಹಕ್ಕು ಹೊಂದಿದ್ದರಿಂದ ಸಂಖ್ಯಾಬಲ 26ಕ್ಕೆ ತಲುಪಲಿದೆ. ಈ ಮಧ್ಯೆ ಜೆಡಿಎಸ್ನ ನಾಲ್ವರು ಸದಸ್ಯರಲ್ಲಿ ಯಾರು ಯಾವ ಕಡೆ ವಾಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ, ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಆ.8ರಂದು ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಂಸದ ರಾಧಾಕೃಷ್ಣ ದೊಡ್ಡಮನಿ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಆಕಾಂಕ್ಷಿಗಳು, ಪದಾಧಿಕಾರಿಗಳ ಸಭೆ ನಡೆದಿದೆ. ಪಾಲಿಕೆಯಲ್ಲಿ ಪಕ್ಷ ಬಹುಮತ ಹೊಂದಿದೆ. ಆಕಾಂಕ್ಷಿಗಳು ಹೆಚ್ಚಿದ್ದರೂ ಸಮಗ್ರ ಚರ್ಚೆ ಬಳಿಕ ಹಿರಿಯರ ಮಾರ್ಗದರ್ಶನದಂತೆ ಸೂಕ್ತ ವ್ಯಕ್ತಿಗಳನ್ನು ಗುರುತಿಸಲಾಗುವುದು.
— > ಜಗದೇವ ಗುತ್ತೇದಾರ್ ಜಿಲ್ಲಾಧ್ಯಕ್ಷ, ಕಾಂಗ್ರೆಸ್