ಭೋವಿ ಸಂಟನೆ ಪದಾಧಿಕಾರಿಗಳ ಆಯ್ಕೆ Bhovi
ಬಂಗಾರಪೇಟೆ: ಜಿಲ್ಲೆಯಲ್ಲಿ ಸಂಘಟನಾ ಚಟುವಟಿಕೆ ನಡೆಸಲಾಗುತ್ತಿದ್ದು, ಸಮಾಜದ ಐಕ್ಯತೆ, ಅಭಿವೃದ್ಧಿ ಹಾಗೂ ಯುವಕರನ್ನು ಸಂಘಟಿಸುವ ಉದ್ದೇಶದಿಂದ ಸಂಘಟನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಜಿಲ್ಲಾ ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ವಿ.ಗೋಪಾಲ್ ಹೇಳಿದರು.Bhovi
ನಗರದ ಅಂಬೇಡ್ಕರ್ ಪ್ರತಿಮೆ ಬಳಿ ನೂತನ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ಸಮುದಾಯದ ಬಲವರ್ಧನೆಗಾಗಿ ಹೊಸ ಸದಸ್ಯರಿಗೆ ಆದ್ಯತೆ ನೀಡಲಾಗುತ್ತಿದೆ. ಎಲ್ಲ ಸಮುದಾಯಗಳ ಜತೆ ವಿಶ್ವಾಸ ಬೆಳೆಸಿಕೊಂಡು ಗ್ರಾಮಮಟ್ಟದಲ್ಲಿ ಸಂಘಟನೆಗೆ ಮುಂದಾಗಬೇಕು ಎಂದರು.
ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಮುಂದಿನ ದಿನಗಳಲ್ಲಿ ಭೋವಿ ಸಮಾಜದ ಹಿತಕ್ಕಾಗಿ ಇನ್ನಷ್ಟು ಬಲವಾದ ಸಂಘಟನಾ ಕಾರ್ಯ ಕೈಗೊಳ್ಳುವ ಸಂಕಲ್ಪದೊಂದಿಗೆ ಕಾರ್ಯಕ್ರಮ ರಚಿಸಲಾಗುವುದು ಎಂದರು.
ತಾಲೂಕು ಅಧ್ಯಕ್ಷ ಕಣಿಂಬೆಲೆ ಮಂಜುನಾಥ್ ಮಾತನಾಡಿ, ಸಮುದಾಯದ ಬಲವರ್ಧನೆಗೆ ಎಲ್ಲರ ಮಾರ್ಗದರ್ಶನ ಪಡೆದು ಸಂಘಟನೆ ಮಾಡಲಾಗುವುದು. ಸದ್ಯದಲ್ಲೆ ಎಲ್ಲ ಹಳ್ಳಿಗಳಿಗೆ ಪ್ರವಾಸ ಮಾಡಿ ಚದುರಿಹೋಗಿರುವ ಸಮುದಾಯವನ್ನು ಒಂದು ಮಾಡಲಾಗುವುದು ಎಂದು ತಿಳಿಸಿದರು.
ತಾಲೂಕು ಭೋವಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಕಣಿಂಬೆಲೆ ಮಂಜುನಾಥ್, ಯುವ ಘಟಕ ಅಧ್ಯಕ್ಷರಾಗಿ ತಮ್ಮೇನಹಳ್ಳಿ ನಾರಾಯಣಸ್ವಾಮಿ, ಗೌರವಾಧ್ಯಕ್ಷರಾಗಿ ಗಾಜಗಾ ಕೃಷ್ಣಪ್ಪ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.