ಸಾಂದರ್ಭಿಕ ಚಿತ್ರ 
ರಾಜ್ಯ

ರೇಷನ್​ಗೆ ಹಿರಿಯರ ಪರದಾಟ: ಬೆರಳಚ್ಚು ಬಾರದವರಿಗಿಲ್ಲ ಪಡಿತರ; ಒಟಿಪಿ ಪರಿಗಣನೆಗೆ ಆಗ್ರಹ

ಬೆಂಗಳೂರು: 

ರಾಜ್ಯದಲ್ಲಿ ರೇಷನ್ ಪಡೆಯಲು ಹಿರಿಯ ನಾಗರಿಕರು ಪರದಾಡುವ ಪರಿಸ್ಥಿತಿ ನಿರ್ವಣವಾಗಿದೆ. ಹಿಂದೆ ಬೆರಳಚ್ಚು (ಬಯೋಮೆಟ್ರಿಕ್) ಅಳಿಸಿ ಹೋಗಿರುವವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಒಟಿಪಿ ಮೂಲಕ ಪಡಿತರ ವಿತರಿಸುವ ವ್ಯವಸ್ಥೆ ಜಾರಿಯಲ್ಲಿತ್ತು. ಈ ಕ್ರಮದಿಂದಾಗಿ ವಯೋಸಹಜವಾಗಿ ಹೆಬ್ಬೆರಳು ಗೆರೆ ಅಳಿಸಿ ಬೆರಳಚ್ಚು ಮೂಡದವರಿಗೆ ಪಡಿತರ ಪಡೆಯಲು ಸಹಾಯವಾಗುತ್ತಿತ್ತು. ಆದರೆ, ಇದೀಗ ಆಹಾರ ಇಲಾಖೆ ಏಕಾಏಕಿ ವ್ಯವಸ್ಥೆ ಬದಲಿಸಿರುವ ಪರಿಣಾಮ ಹಿರಿಯ ನಾಗರಿಕರು ಪಡಿತರ ಸಿಗದೆ ಪರಿತಪಿಸುವಂತಾಗಿದೆ.

ಬೆರಳಚ್ಚು ಬಾರದೆ ಇರುವ ಹಿರಿಯರು ಪಡಿತರಕ್ಕಾಗಿ ಪ್ರತಿನಿತ್ಯ ನ್ಯಾಯಬೆಲೆ ಅಂಗಡಿಗಳಿಗೆ ಅಲೆದಾಡುವಂತಾಗಿದೆ. ಹಾಗಾಗಿ, ಹಿಂದಿನಂತೆ ಒಟಿಪಿ ಮೂಲಕ ರೇಷನ್ ವಿತರಿಸಬೇಕೆಂದು ಹಲವರು ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರು: 

ರಾಜ್ಯದಲ್ಲಿ ಬೆರಳಚ್ಚು ಸಮಸ್ಯೆ ಹೊಂದಿರುವ ಫಲಾನುಭವಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅಂಥವರು ಆಯಾ ವ್ಯಾಪ್ತಿಯ ಆಹಾರ ನಿರೀಕ್ಷಕರ ಗಮನಕ್ಕೆ ತಂದಲ್ಲಿ ಮೇಲಧಿಕಾರಿಗಳ ಅನುಮೋದನೆ ಪಡೆದು ಫಲಾನುಭವಿ ವಿವರವನ್ನು ಲಾಗಿನ್​ನಲ್ಲಿ ನಮೂದಿಸಲಾಗುತ್ತದೆ. 

ಪ್ರತಿ ತಿಂಗಳು ನಿರೀಕ್ಷಕರ ಲಾಗಿನ್​ನಲ್ಲೇ ಅವರಿಗೆ ಪಡಿತರ ವಿತರಿಸಲಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಮಾತನಾಡಿ, ಬೆರಳಚ್ಚು ಬಾರದವರಿಗೆ ಮೂಬೈಲ್ ಒಟಿಪಿ ಮೂಲಕ ಪಡಿತರ ವಿತರಿಸುವುದನ್ನು ಆಹಾರ ಇಲಾಖೆ ನಿಲ್ಲಿಸಿದೆ. ಹೀಗಾಗಿ ಹಿರಿಯ ನಾಗರಿಕರಿಗೆ ಒಟಿಪಿ ಮೂಲಕ ರೇಷನ್ ವಿತರಿಸಲು ಇಲಾಖೆ ಆದೇಶ ಹೊರಡಿಸಬೇಕೆಂದು ಮನವಿ ಮಾಡಿದರು.

ಅನ್ನ ಸುವಿಧಾ ಎಡವಟ್ಟು

ಪಡಿತರ ಪಡೆಯಲು ಸಾಧ್ಯವಾಗದ ವೃದ್ಧರು, ಮಹಿಳೆ ಯರು, ದೈಹಿಕ ಅಶಕ್ತ ಫಲಾನುಭವಿಗಳಿಗೆ ನೆರವಾಗಲು ಆಹಾರ ಇಲಾಖೆ ‘ಅನ್ನ ಸುವಿಧಾ’ ಯೋಜನೆ ಜಾರಿಗೆ ತಂದಿದೆ. 75-80 ವರ್ಷ ಮೇಲ್ಪಟ್ಟ ಹಿರಿಯರ ಮನೆ ಬಾಗಿಲಿಗೆ ಉಚಿತವಾಗಿ ರೇಷನ್ ವಿತರಿಸುವುದು ಯೋಜನೆಯ ಉದ್ದೇಶ. ಈ ಸೇವೆ ಒದಗಿಸುವ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಪ್ರತಿ ಕುಟುಂಬಕ್ಕೆ 50 ರೂಪಾಯಿ ಸರ್ಕಾರ ಪಾವತಿಸುತ್ತದೆ. ಆದರೆ ಯೋಜನೆ ಸಮರ್ಪಕವಾಗಿ ಎಲ್ಲಿಯೂ ಅನುಷ್ಠಾನಕ್ಕೆ ಬಂದಿಲ್ಲ.