ಬೆಂಗಳೂರು: ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಯ ಸಲುವಾಗಿ ದೇವಸ್ಥಾನಗಳಲ್ಲಿ ಭಕ್ತರಿಗೆ ಮೂಲಸೌಕರ್ಯ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಕಂದಾಯ ಇಲಾಖೆ ಸೂಚನೆ ನೀಡಿದೆ.
ದೇವಾಲಯಗಳ ಜಿಲ್ಲಾವಾರು ಪ್ರವಾಸಿ ಮಂದಿರಗಳನ್ನು ಪಟ್ಟಿ ಮಾಡಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳುವಂತೆ ಇಲಾಖೆ ಕೆಲ ಸೂಚನೆಗಳನ್ನು ನೀಡಿದೆ. ಅದರಂತೆ ಭಕ್ತಾದಿಗಳ ಅನುಕೂಲಕ್ಕಾಗಿ ದೇವಾಲಯಗಳಿಗೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸುವುದು, ಶೌಚಗೃಹ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮತ್ತು ಸಿಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಭಕ್ತಾದಿಗಳು ತಂಗಲು ಉತ್ತಮ ಕೊಠಡಿ ವ್ಯವಸ್ಥೆ, ಭಕ್ತರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ. ಅಗತ್ಯ ಇದ್ದರೆ ಏಜೆನ್ಸಿ ಮುಖಾಂತರ ಪಾರ್ಕಿಂಗ್ ಶುಲ್ಕ ಪಡೆದು ಸೂಕ್ತ ವ್ಯವಸ್ಥೆ ಮಾಡಬಹುದು. ಪ್ರವರ್ಗ-ಎ ಮತ್ತು ಬಿ ದೇವಸ್ಥಾನಗಳಲ್ಲಿ ಲಭ್ಯವಿರುವ ಭೂಮಿಯ ವಿವರಗಳನ್ನು ಸಂಗ್ರಹಿಸುವುದು, ದೇವಸ್ಥಾನಗಳ ಸಮೀಪ ಇರುವ ಸರ್ಕಾರಿ ಜಮೀನುಗಳನ್ನು ಆಯಾ ದೇವಸ್ಥಾನಗಳ ಹೆಸರಿಗೆ ಕಾಯ್ದಿರಿಸಲು ಕ್ರಮ ವಹಿಸಬೇಕೆಂದು ಆದೇಶಿಸಿದ್ದಾರೆ.
ದೇವಾಲಯ ಆಸ್ತಿಗಳ ಜಿಪಿಎಸ್ ಅನ್ನು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದು, ದೇವಸ್ಥಾನಗಳಲ್ಲಿ ಲಭ್ಯ ಇರುವ ಜಮೀನಿನ ವಿವರಗಳನ್ನು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆಗೆ ಕಳುಹಿಸಿ ಅವರ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ತಯಾರಿಸಿಕೊಳ್ಳಬಹುದು. ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದು ಹಾಗೂ ದೇವಾಲಯಗಳಲ್ಲಿ ಛತ್ರ, ಅತಿಥಿ ಗೃಹ ಹಾಗೂ ಮೂಲಸೌಕರ್ಯಗಳನ್ನು ದಾನಿಗಳ ಮೂಲಕ ನಿರ್ಮಿಸಲು ಕ್ರಮ ವಹಿಸುವಂತೆ ಹಾಗೂ ಯೋಜನೆಗಳ ಕುರಿತು ವ್ಯಾಪಕ ಪ್ರಚಾರ ಮಾಡಿ ಭಕ್ತರನ್ನು ಸೆಳೆಯುವ ಪ್ರಯತ್ನ ಮಾಡಬೇಕೆಂದು ಇಲಾಖೆ ಆದೇಶ ನೀಡಿದೆ.
ಕ್ಯಾಲೆಂಡರ್ ತಯಾರಿಸಿ: ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ದೇವಸ್ಥಾನಗಳಲ್ಲಿ ನಡೆಯಲಿರುವ ಪ್ರಮುಖ ಉತ್ಸವಗಳ ವಿವರಗಳನ್ನು ಕ್ಯಾಲೆಂಡರ್‌ಗಳಲ್ಲಿ ದಾಖಲಿಸುವುದು ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ.
ಭಕ್ತಾದಿಗಳಿಗೆ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ದೇವಾಲಯಗಳ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಯೋಜನೆ ರೂಪಿಸಲು ಸೂಚಿಸಲಾಗಿದೆ. ದೇವಸ್ಥಾನಗಳ ಆಸ್ತಿಗಳ ಸಂರಕ್ಷಣೆ ಮತ್ತು ಒತ್ತುವರಿ ತೆರವುಗೊಳಿಸಲು ಕ್ರಮ ವಹಿಸಲಾಗುವುದು.
ಡಾ.ಜಿ.ಪರಮೇಶ್ವರ, ಉಪಮುಖ್ಯಮಂತ್ರಿ, ಕಂದಾಯ ಸಚಿವ