ನಂದ್ಯಾಳ ಗ್ರಾಮದಲ್ಲಿ ಸರಣಿ ಚೆಕ್ ಡ್ಯಾಂ ಮತ್ತು ರೀಚಾರ್ಜ್ ಶಾಫ್ಟ್ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವ ಕಾಮಗಾರಿ ಕಾರ್ಯಕ್ರಮಕ್ಕೆ ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು. ಶಿವಾನಂದ ಸ್ವಾಮೀಜಿ, ಪ್ರಮೋದ ಹೊಟ್ಟಿ, ಹಣಮಂತರಾಯ ದಳವಾಯಿ ಮತ್ತಿತರರಿದ್ದಾರೆ.
- ಸಚಿವ ಎಂ.ಬಿ. ಪಾಟೀಲ ಭರವಸೆ
- ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ
ವಿಜಯಪುರ: ಅಂತರ್ಜಲ ನಿರ್ವಹಣೆಯಲ್ಲಿ ಜಿಲ್ಲೆ ದೇಶಕ್ಕೆ ಮಾದರಿಯಾಗುವಂತೆ ಕಾರ್ಯ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹೇಳಿದರು.
ಸಣ್ಣ ನೀರಾವರಿ ಇಲಾಖೆಯ 997 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕಾರಜೋಳ, ದೂಡಿಹಾಳ, ಸಂಗಾಪುರ, ಕಾಖಂಡಕಿ, ಮಮದಾಪುರ ಮತ್ತು ಸಂಗಾಪುರ-ನಂದ್ಯಾಳ ಗ್ರಾಮಗಳ ಹಳ್ಳಗಳಿಗೆ ಅಡ್ಡಲಾಗಿ ಸರಣಿ ಚೆಕ್ ಡ್ಯಾಂ ಮತ್ತು ರೀಚಾರ್ಜ್ ಶಾಫ್ಟ್ ನಿರ್ಮಾಣ ಮಾಡುವ ಮೂಲಕ ಅಂತರ್ಜಲ ಅಭಿವೃದ್ಧಿ ಪಡಿಸುವ ಕಾಮಗಾರಿ, ಲೋಕೋಪಯೋಗಿ ಇಲಾಖೆಯ 5 ಕೋಟಿ ರೂ. ವೆಚ್ಚದಲ್ಲಿ ಕಂಬಾಗಿ-ನಂದ್ಯಾಳ ರಸ್ತೆ ಕಾಮಗಾರಿ ಮತ್ತು ಕೆಆರ್ ಐಡಿಎಲ್ ಇಲಾಖೆಯ 50 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ನಂದ್ಯಾಳ ಗ್ರಾಮದಲ್ಲಿ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿ ಕಿ.ಮೀ ಒಂದರಂತೆ ಹತ್ತು ಪ್ಯಾಕೇಜ್‌ನಂತೆ ಪ್ರಸ್ತುತ ಆರು ಪ್ಯಾಕೇಜ್ 39 ಗ್ರಾಮಗಳ ಕೆಳಭಾಗದ ಕೊಳವೆಬಾವಿ, ತೆರೆದ ಬಾವಿ, ಕೃಷಿ ಚಟುವಟಿಕೆ, ಪ್ರಾಣಿ ಪಕ್ಷಿಗಳಿಗೆ ಅನುಕೂಲ ಆಗುವುದರ ಜತೆಗೆ ಬೇಸಿಗೆಯಲ್ಲಿಯೂ ಹಳ್ಳ ಕೊಳ್ಳಗಳು ಭರ್ತಿಯಾಗಲಿವೆ. ಅದರಿಂದ ಬಿರು ಬೇಸಿಗೆಯಲ್ಲೂ ಜೀವ ಸಂಕುಲ ಬದುಕಲು ಅನುಕೂಲವಾಗಲಿದೆ ಎಂದರು.
ಹಳ್ಳಗಳಿಂದ ಬರುವ ನೀರನ್ನು ಸರಣಿ ಬಾಂದಾರ ನಿರ್ಮಿಸಿ ನೀರು ಹಿಂಗುವ ಈ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೆನಾಲ್ ನೆಟ್ ವರ್ಕ್ ಎಸ್ಕೆಪ್ ಮಾಡುವ ಮೂಲಕ ಇಪ್ಪತ್ತು ಬಾಂದಾರ ಹತ್ತು ಕೋಟಿ ರೂ. ವೆಚ್ವದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಗೆ ತೀವ್ರ ಬರಗಾಲ ಕಾಡುತಿತ್ತು. ಬರಗಾಲ ನಿವಾರಣಾ ಕೇಂದ್ರ ಜಿಲ್ಲೆಯಲ್ಲಿ ಇತ್ತು. 14000 ಕೋಟಿ ರೂ. ವೆಚ್ಚ ಮಾಡಿ ನೋಟಿಫಿಕೇಶನ್ ಆಗುವ ಮೂಲಕ ಎಲ್ಲ ಸ್ಥಾವರ ಮುಗಿಸಿ ಅಂತರ್ಜಲ ಹೆಚ್ಚಿಗೆ ಮಾಡುವ ಮೂಲಕ ಬರದ ಜಿಲ್ಲೆ ಹಣೆ ಪಟ್ಟಿ ತೊಡೆದು ಹಾಕಲಾಗಿದೆ. ಗೆಜೆಟ್ ನೋಟಿಫಿಕೇಶನ್ ಮೊದಲು ಪರ್ಯಾಯವಾಗಿ ನೀರಾವರಿಯಿಂದ ಹಳ್ಳಕೊಳ್ಳ ತುಂಬಿದೆ ಎಂದು ಸಚಿವರು ಮಾಹಿತಿ ನೀಡಿದರು.
ಆರೋಗ್ಯ ಕಾಪಾಡಿಕೊಳ್ಳಿ: ಬಿರು ಬೇಸಿಗೆಯಿಂದಾಗಿ ಬಿಸಿ ಗಾಳಿ ಹೆಚ್ಚುತ್ತಿದೆ. ಹೀಗಾಗಿ, ಶಾಲಾ ಮಕ್ಕಳು, ವಯೋವೃದ್ಧರು, ಅನಾರೋಗ್ಯಕ್ಕೆ ಒಳಗಾದವರು ಮಧ್ಯಾಹ್ನ 12ರಿಂದ 5ರವರೆಗೆ ಹೊರಗೆ ಹೋಗದೇ, ಮನೆಯಲ್ಲೇ ಕುಳಿತು ಆರೋಗ್ಯ ಕಾಪಾಡಿಕೊಳ್ಳಬೇಕು ಸಲಹೆ ನೀಡಿದರು.
ಕುಡಿಯುವ ನೀರಿಗೆ ಆದ್ಯತೆ: ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುವುದು. ಅದಕ್ಕೆಂದೇ ಜಲಾಶಯದಲ್ಲಿ ನೀರು ಕಾಯ್ದಿರಿಸಲಾಗುತ್ತಿದೆ. ಜನ-ಜಾನುವಾರುಗಳಿಗಿಗೆ ನೀರು ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಲೋಕೋಪಯೋಗಿ ಇಲಾಖೆಯ ಎಇಇ ಪ್ರಮೋದ ಹೊಟ್ಟಿ, ಗ್ಯಾರಂಟಿ ಯೋಜನೆಗಳ ತಾಲೂಕಾ ಅಧ್ಯಕ್ಷ ಹಣಮಂತರಾಯ ದಳವಾಯಿ ಮತ್ತಿತರರಿದ್ದರು.