Efforts for the all-round development of the monastery
ಕೊರಟಗೆರೆ: ತಾಲೂಕಿನ ಸಿದ್ದರಬೆಟ್ಟದಲ್ಲಿರುವ ಬಾಳೆಹೊನ್ನೂರು ಖಾಸಾ ಶಾಖಾ ಮಠವು ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗದೇ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ನಿರಂತರ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯಲ್ಲಿಯೇ ವಿಶಿಷ್ಟ ಗುರುತನ್ನು ಮೂಡಿಸಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯ ಶ್ರೀಗಳ 20ನೇ ವರ್ಷದ ಪಟ್ಟಾಧಿಕಾರ ಮಹೋತ್ಸವದಲ್ಲಿ ಮಾತನಾಡಿದ ಅವರು, ಪಟ್ಟಾಧಿಕಾರ ಸ್ವೀಕರಿಸಿದ ಬಳಿಕ ಶ್ರೀಗಳು ಮಠದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಮೂಲಕ ಇಡೀ ರಾಜ್ಯದಾದ್ಯಂತ ಭಕ್ತಗಣವನ್ನು ಸಂಪಾದಿಸಿದ್ದಾರೆ ಎಂದು ಹೇಳಿದರು.
ವೀರಭದ್ರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಕ್ತರ ಸಹಕಾರದಿಂದ ಮಠವು ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ, ಸಾಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಹೆಸರಿಗೆ ಇದು ವೀರಶೈವ ಪರಂಪರೆಯನ್ನು ಅನುಸರಿಸುವ ಮಠವಾದರೂ, ಎಲ್ಲ ಸಮುದಾಯಗಳ ಭಕ್ತರು ಮಠದ ಸೇವಾ ಕಾರ್ಯಗಳಿಗೆ ಕೈಜೋಡಿಸಿ ತಮ್ಮದೇ ಆದ ಕಾಣಿಕೆ ಮತ್ತು ಸಹಕಾರ ನೀಡುತ್ತಿರುವುದು ಮಠದ ಸಂಸ್ಕಾರ ಮತ್ತು ಸೇವಾ ಮನೋಭಾವದ ಪ್ರತಿಫಲ ಎಂದರು.
ಈಗಾಗಲೇ ಮಠದಿಂದ ಸಂಸತ ಶಾಲೆ ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳ ನಿರ್ವಹಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಭಕ್ತರ ಸಹಕಾರದಿಂದ ಇನ್ನಷ್ಟು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಆರೋಗ್ಯ ವಿಚಾರದಲ್ಲಿ ಆಯುರ್ವೇದಿಕ್ ಆಸ್ಪತ್ರೆ ತೆರೆಯಲು ಮಠ ಸಿದ್ಧತೆ ಮಾಡಿದೆ ಎಂದು ಹೇಳಿದರು