Education to enhance technical skills is necessary
ಶಿಡ್ಲಟ್ಟ : ಮಕ್ಕಳಿಗೆ ರೋಬೋಟಿಕ್ಸ್ ಕಲಿಕೆಯು ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿಸುತ್ತದೆ ಮತ್ತು ತರ್ಕಬದ್ಧ ಚಿಂತನೆ ಬೆಳೆಸುತ್ತದೆ. ಇದು ಸೃಜನಶೀಲತೆ ಮತ್ತು ಸಮಸ್ಯೆ ಪರಿಹಾರದ ಕೌಶಲ ಬಲಪಡಿಸುತ್ತದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಎಸ್.ಪ್ರಕಾಶ್ ತಿಳಿಸಿದರು.
ನಗರದ ಶಾರದಾ ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ರೋಬೋಟಿಕ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ರೋಬೋಟಿಕ್ಸ್ಅನ್ನು ಪ್ರಾಥಮಿಕ ತರಗತಿಯಿಂದ ಶಾರದಾ ವಿದ್ಯಾಸಂಸ್ಥೆಯಲ್ಲಿ ಮಕ್ಕಳಿಗೆ ಒಂದು ವಿಷಯವಾಗಿ ಕಲಿಸುತ್ತಿರುವುದು ಅನುಕರಣೀಯ.ನಗರದಲ್ಲಿನ ಶಿಕ್ಷಣದ ರೀತಿಯಲ್ಲಿ ಗ್ರಾಮಾಂತರ ಭಾಗದಲ್ಲಿಯೂ ತಾಂತ್ರಿಕ ಕೌಶಲ ವೃದ್ಧಿಸುವ ಶಿಕ್ಷಣದ ಮೂಲಕ ಮಕ್ಕಳಲ್ಲಿ ನಾವೀನ್ಯತೆಯನ್ನು ಬೆಳೆಸಲಾಗುತ್ತಿದೆ. ಇದು ಡಿಜಿಟಲ್ ಮಕ್ಕಳಲ್ಲಿ ಕೌಶಲ್ಯಗಳನ್ನು ಬಲಪಡಿಸಿ, ಅವರನ್ನು ಭವಿಷ್ಯದ ಉದ್ಯೋಗಗಳಿಗೆ ಸಜ್ಜುಗೊಳಿಸುತ್ತದೆ. ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ಪೂರಕವಾಗಿದೆ. ಈ ಮಕ್ಕಳು ಮುಂದೆ ದೇಶದ ಆಸ್ತಿಗಳಾಗುತ್ತಾರೆ ಎಂದರು.
ಶಾರದಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್ ಮಾತನಾಡಿ, 2 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಯುವಿಪೆಪ್ ಸಂಸ್ಥೆ ಮೂಲಕ ರೋಬೋಟಿಕ್ಸ್ ಕಲಿಸಲಾಗುತ್ತಿದೆ. ಕಲಿತಿರುವ ಜ್ಞಾನವನ್ನು ಮಕ್ಕಳು ಸುಮಾರು 35ಕ್ಕೂ ಹೆಚ್ಚು ಮಾದರಿಗಳ ಮೂಲಕ ಪ್ರದರ್ಶಿಸಿದ್ದಾರೆ ಎಂದರು.
ಶಾರದಾ ವಿದ್ಯಾಸಂಸ್ಥೆ ಅಧ್ಯಕ್ಷ ಎ.ಆರ್.ಮುನಿರತ್ನಂ, ಎ.ಆರ್.ಎಂ ಪಿಯು ಕಾಲೇಜಿನ ಪ್ರಾಂಶುಪಾಲ ಮೂರ್ತಿ ಸಾಮ್ರಾಟ್, ಮುಖ್ಯಶಿಕ್ಷಕರಾದ ರಾಜೇಶ್, ಸಿದ್ಧರಾಜು ಇದ್ದರು.