ಅರಕಲಗೂಡಿನಲ್ಲಿ ಗುರುವಾರ ವಿಶ್ವಕರ್ಮ ಜಯಂತಿ ಅಂಗವಾಗಿ ಆಯೋಜಿಸಿದ್ದ ಮೆರವಣಿಗೆಗೆ ತಹಸೀಲ್ದಾರ್ ಕೆ.ಸಿ. ಸೌಮ್ಯಾ ಚಾಲನೆ ನೀಡಿದರು. ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಗೋವಿಂದರಾಜು ಇತರರು ಪಾಲ್ಗೊಂಡಿದ್ದರು. 
ರಾಜ್ಯ

ಶಿಕ್ಷಣ ಜ್ಞಾನದ ಜತೆ ಆರ್ಥಿಕ ಪ್ರಗತಿಗೆ ದಾರಿ

ಅರಕಲಗೂಡು: ಶಿಕ್ಷಣದಿಂದ ಮಾತ್ರ ಸಮಾಜದ ಸಮಗ್ರ ಅಭಿವೃದ್ಧಿ ಸಾಧ್ಯವಾಗಲಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಸ್ಪರ್ಧಾತ್ಮಕ ಮನೋಭಾವ ಬೆಳೆಸಬೇಕು ಎಂದು ತಹಸೀಲ್ದಾರ್ ಕೆ.ಸಿ.ಸೌಮ್ಯಾ ಸಲಹೆ ನೀಡಿದರು.

ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಗುರುವಾರ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವು ವ್ಯಕ್ತಿಯ ಜ್ಞಾನವನ್ನು ವೃದ್ಧಿಸುವುದರ ಜತೆಗೆ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ಮೂಲಕ ಸಮಾಜವೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.

ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮರು ಕೌಶಲ ಮತ್ತು ಸೃಜನಶೀಲತೆಯ ಪ್ರತೀಕವಾಗಿದ್ದಾರೆ. ತಂತ್ರಜ್ಞಾನ ಹಾಗೂ ಕೌಶಲದ ಮಹತ್ವವನ್ನು ನಮ್ಮ ಪೂರ್ವಜರು ತಮ್ಮ ಕಾರ್ಯಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅಮರಶಿಲ್ಪಿ ಜಕಣಾಚಾರಿ ಸೇರಿದಂತೆ ಹಲವು ಶಿಲ್ಪಿಗಳು ತಮ್ಮ ಬುದ್ಧಿವಂತಿಕೆ ಮತ್ತು ಪರಿಶ್ರಮದಿಂದ ಅನೇಕ ಅದ್ಭುತ ನಿರ್ಮಾಣಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಪೂರ್ವಜರು ಬೆಳೆಸಿಕೊಂಡು ಬಂದಿರುವ ಕಲೆ, ಕೌಶಲ ಹಾಗೂ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿವೇಕದಿಂದ ಜೀವನ ನಡೆಸುವ ಮೂಲಕ ಆರೋಗ್ಯವಂತ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ಗೋವಿಂದರಾಜು, ಶಂಕರಾಚಾರ್ಯ, ಸದಾಶಿವಾಚಾರ್ಯ, ಸುಬ್ಬಾಚಾರ್ಯ, ಪಾಲಾಕ್ಷಾಚಾರ್ಯ, ಮಹೇಶ್, ಕೃಷ್ಣ, ಮಂಜುನಾಥ್, ದೇವರಾಜು, ದಿವಾಕರ್ ಇತರರಿದ್ದರು.