High court 
ರಾಜ್ಯ

ಸಿಬಿಲ್​ ಆಧರಿಸಿ ಶಿಕ್ಷಣ ಸಾಲ ನಿರಾಕರಿಸುವಂತಿಲ್ಲ| High court

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ನಿಂದ ಮಹತ್ವದ ಆದೇಶ
  • ಪಾಲಕರ ಆರ್ಥಿಕ ಸಂಕಷ್ಟಕ್ಕೆ ವಿದ್ಯಾರ್ಥಿ ಬಲಿಯಾಗಬಾರದು
ಬೆಂಗಳೂರು: ಪಾಲಕರ ಸಿಬಿಲ್​ ಸ್ಕೋರ್​ ಕಡಿಮೆಯಿದೆ ಅಥವಾ ಅವರು ಸಾಲದ ಸುಸ್ತಿದಾರರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಅರ್ಹ ವಿದ್ಯಾರ್ಥಿಗೆ ಶಿಕ್ಷಣ ಸಾಲವನ್ನು ನಿರಾಕರಿಸಬಾರದು ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಶಿಕ್ಷಣ ಸಾಲಗಳನ್ನು ವಾಣಿಜ್ಯ ಸಾಲಗಳಂತೆ ಪರಿಗಣಿಸಬಾರದು. ಅದು ವಿದ್ಯಾರ್ಥಿಯ ಭವಿಷ್ಯ ಮತ್ತು ಮಾನವ ಸಂಪನ್ಮೂಲದ ಮೇಲಿನ ಹೂಡಿಕೆಯಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಪಾಲಕರ ಸಿಬಿಲ್​ ಸ್ಕೋರ್​ ಕಡಿಮೆಯಿದೆ ಎಂಬ ಕಾರಣಕ್ಕೆ ಶಿಕ್ಷಣ ಸಾಲ ನಿರಾಕರಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್​ನ ಕ್ರಮವನ್ನು ಪ್ರಶ್ನಿಸಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ವಿದ್ಯಾರ್ಥಿ ಸಂಕೇತ್​ ರಾಯಪ್ಪ ಮತ್ತು ಅವರ ತಂದೆ ರಾಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಠ್​ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿ ಪುರಸ್ಕರಿಸಿದ ನ್ಯಾಯಮೂರ್ತಿ ಸಚಿನ್​ ಶಂಕರ್​ ಮಗದುಮ್​ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್​ ವ್ಯಾಸಂಗ ಮಾಡುತ್ತಿರುವ ಸಂಕೇತ್​, 12.56 ಲಕ್ಷ ರೂಪಾಯಿ ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಪಾಲಕರು ಕಡಿಮೆ ಸಿಬಿಲ್​ ಸ್ಕೋರ್​ ಹೊಂದಿದ್ದಾರೆ ಎಂಬ ಕಾರಣಕ್ಕೆ ಬ್ಯಾಂಕ್​ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಬ್ಯಾಂಕ್​ನ ಹಿಂಬರಹವನ್ನು ರದ್ದುಪಡಿಸಿದ್ದು, ಎರಡು ವಾರಗಳಲ್ಲಿ ಅರ್ಜಿ ಮರುಪರಿಶೀಲಿಸುವಂತೆ ನಿರ್ದೇಶನ ನೀಡಿದೆ.
ಸಾಮಾಜಿಕ ನ್ಯಾಯತತ್ವವನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಪಾಲಕರ ಆರ್ಥಿಕ ಸಂಕಷ್ಟದ ಶಿೆಯನ್ನು ವಿದ್ಯಾರ್ಥಿಗಳ ಮೇಲೆ ಹೇರುವುದು ಸಂವಿಧಾನ ನೀಡಿರುವ ಸಮಾನತೆ ಮತ್ತು ಶಿಕ್ಷಣದ ಹಕ್ಕಿನ ಉಲ್ಲಂನೆಯಾಗುತ್ತದೆ ಎಂದು ಸ್ಪಷ್ಟಪಡಿಸಿದೆ.

ವಿದ್ಯಾರ್ಥಿಯ ಕನಸು ಕಸಿಯಲಾಗದು:

ಸಿಬಿಲ್​ ಸ್ಕೋರ್​ ಎನ್ನುವುದು ವಾಣಿಜ್ಯ, ಗೃಹ ಅಥವಾ ವೈಯಕ್ತಿಕ ಸಾಲಗಳನ್ನು ನೀಡುವಾಗ ಪರಿಶೀಲಿಸಬೇಕಾದ ಮಾನದಂಡವೇ ಹೊರತು ಶಿಕ್ಷಣ ಸಾಲಕ್ಕಲ್ಲ. ಶಿಕ್ಷಣ ಸಾಲದಲ್ಲಿ ನಿಜವಾದ ಸಾಲಗಾರ ವಿದ್ಯಾರ್ಥಿಯೇ ಆಗಿರುತ್ತಾನೆ. ಆತನ ಮುಂದಿನ ಉದ್ಯೋಗಾವಕಾಶ ಮತ್ತು ಗಳಿಕೆಯ ಸಾಮರ್ಥ್ಯವೇ ಸಾಲಕ್ಕೆ ಮುಖ್ಯ ಭದ್ರತೆಯಾಗಿರುತ್ತದೆ. ಆದ್ದರಿಂದ ಪಾಲಕರ ಆರ್ಥಿಕ ಹಿನ್ನೆಲೆಯನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಸಾಲ ನಿರಾಕರಿಸುವುದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಉನ್ನತ ಶಿಕ್ಷಣದ ಕನಸನ್ನು ಕಸಿದುಕೊಂಡಂತೆ ಎಂದು ನ್ಯಾಯಪೀಠ ಅವಲೋಕನ ಮಾಡಿದೆ. 
ℹ️

ಮರುಪರಿಶೀಲನೆಗೆ ನಿರ್ದೇಶನ 

ಸಾಲ ತಿರಸ್ಕರಿಸಿದ್ದ ಬ್ಯಾಂಕ್​ನ ಹಿಂಬರಹವನ್ನು ರದ್ದುಗೊಳಿಸಿರುವ ನ್ಯಾಯಪೀಠ, ವಿದ್ಯಾರ್ಥಿಯ ಶೈಕ್ಷಣಿಕ ಅರ್ಹತೆ, ಕೋರ್ಸ್​ನ ಪ್ರಾಮುಖ್ಯತೆ, ಕಾಲೇಜಿನ ಮಾನ್ಯತೆ ಮತ್ತು ಮುಂದಿನ ಉದ್ಯೋಗಾವಕಾಶದ ಅಂಶಗಳನ್ನು ಪರಿಗಣಿಸಿ ಸಾಲದ ಅರ್ಜಿಯನ್ನು ಮರುಪರಿಶೀಲಿಸಬೇಕು. ಈ ಪ್ರಕ್ರಿಯೆಯಲ್ಲಿ ಪಾಲಕರ ಸಿಬಿಲ್​ ಸ್ಕೋರ್​ ಅನ್ನು ಮುಖ್ಯ ಮಾನದಂಡವಾಗಿ ಇರಿಸಿಕೊಳ್ಳಬಾರದು. ಜತಗೆ ವಿದ್ಯಾರ್ಥಿಯು ಈಗಾಗಲೇ ಕಾಲೇಜಿನ ಮೊದಲ ವರ್ಷಕ್ಕೆ ಪಾವತಿಸಿರುವ ಶುಲ್ಕವನ್ನೂ ಸಾಲದ ವ್ಯಾಪ್ತಿಗೆ ಸೇರಿಸುವ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ಧಾರ ತಿಳಿಸಬೇಕು ಎಂದು ಬ್ಯಾಂಕ್​ಗೆ ಆದೇಶಿಸಿದೆ.