Education is important for children to live a self-respecting life.
ಮಧುಗಿರಿ : ಮುಂದಿನ ದಿನಗಳಲ್ಲಿ ಮಧುಗಿರಿ ಕ್ಷೇತ್ರದಲ್ಲಿ ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ ಮತ್ತು ಶೂಗಳನ್ನು ನೀಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ, ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.
ತಾಲೂಕಿನ ಚಿಕ್ಕಮಾಲೂರು ಗ್ರಾಪಂ ವ್ಯಾಪ್ತಿಯಲ್ಲಿ ಅಂಗನಾಡಿ ಕಟ್ಟಡ, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ 5 ನೂತನ ಕೊಠಡಿಗಳ ನಿಮಾರ್ಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ವಿತರಿಸಲಾಗುತ್ತಿದ್ದು, ಅಂಗನವಾಡಿ ಮಕ್ಕಳಿಗೂ ಉಚಿತವಾಗಿ ಸಮವಸ್ತ್ರ ನೀಡುವ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಾಗುವುದು ಎಂದರು.
ಮಕ್ಕಳ ಸ್ವಾಭಿಮಾನಿ ಬದುಕಿಗೆ ಶಿಕ್ಷಣ ಮುಖ್ಯ. ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿಸದೇ ಉತ್ತಮ ಶಿಕ್ಷಣಕೊಡಿಸಿ ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಪಾಲಕರು ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಎಂದು ಕಿವಿಮಾತು ಹೇಳಿದರು.
ಇಂದು ಆಧಿಕಾರ ಬರಬಹುದು ಹೋಗಬಹುದು. ಆಧಿಕಾರದಲ್ಲಿ ಇದ್ದಾಗ ಅದರ ಲಾಭ ಜನರ ಸೇವೆಗೆ ಮುಡಿಪಾಗಿರಬೇಕು. ಕೊಡಿಗೇನಹಳ್ಳಿ ಹೋಬಳಿ ಪ್ರತಿ ಚುನಾವಣೆಯಲ್ಲೂ ನನಗೆ ಹೆಚ್ಚು ಬಹುಮತ ನೀಡಿದ್ದು, ಈ ಭಾಗದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ ಮನವಿ ಮಾಡಿದ್ದು, ಈ ಭಾಗದ ಅಭಿವೃದ್ಧಿಗೆ ಬದ್ದ ಎಂದರು.
ರಾಜ್ಯದಲ್ಲಿ ಅನ್ನಭಾಗ್ಯ ಹಸಿವನ್ನು ನೀಗಿಸಿದೆ. ಅನ್ನಭಾಗ್ಯ ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ. ಇದು ಎಲ್ಲ ಸಮುದಾಯದ ಬಡವರಿಗೆ ಸಲ್ಲುವ ಯೋಜನೆಯಾಗಿದೆ. ಅನ್ನಭಾಗ್ಯ ನೆಮ್ಮದಿ ಜೀವನಕ್ಕೆ ಸಾಕ್ಷಿಯಾಗಿದೆ. ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಸಲ್ಲುತ್ತಿದೆ. ಚಿಕ್ಕಮಾಲ್ಲೂರು ಗ್ರಾಪಂ ಅನೇಕ ಕಾಮಗಾರಿಗಳಿಗೆ ಪಟ್ಟಿ ನೀಡಿದ್ದು ಹಂತ ಹಂತವಾಗಿ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್ ಶ್ರೀನಿವಾಸ್, ಡಿಡಿಪಿಐ ಮಾಧವರೆಡ್ಡಿ, ಬಿಇಒ ಹನುಮಂತರಾಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಸುವರ್ಣಮ್ಮ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ ದೇನಾಯ್ಕ, ಚಿಕ್ಕಮಾಲೂರು ಗ್ರಾಮದ ಮುಖಂಡರಾದ ಜಗದೀಶ್, ಭಾಸ್ಕರ್ ಇತರರಿದ್ದರು.