Education is essential to attain a higher position. 
ರಾಜ್ಯ

ಉನ್ನತ ಸ್ಥಾನ ದೊರೆಯಲು ಶಿಕ್ಷಣ ಅವಶ್ಯ

education ಮಧುಗಿರಿ: ತಾಲೂಕಿನ ಹನುಮನಹಳ್ಳಿಯಲ್ಲಿ ಇಎಸ್​ಐ ಆಸ್ಪತ್ರೆಯ ಘಟಕ ಪ್ರಾರಂಭಿಸಬೇಕು ಎಂದು ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.
ತಾಲೂಕಿನ ದೊಡ್ಡೇರಿ ಹೋಬಳಿ ಹನುಮನಹಳ್ಳಿಯಲ್ಲಿ ಭಾನುವಾರ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಕಾರ್ಮಿಕ ಇಲಾಖೆ ಆಯುಕ್ತರಾದ ಗೋಪಾಲಕೃಷ್ಣ ಅವರು ಗ್ರಾಮದವರಾಗಿದ್ದು, ಇಎಸ್​ಐ ಆಸ್ಪತ್ರೆ ಘಟಕ ಪ್ರಾರಂಭಿಸಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಸಮಾಜದಲ್ಲಿ ಉನ್ನತ ಸ್ಥಾನಮಾನ ದೊರೆಯಲು ಶಿಕ್ಷಣ ಅತ್ಯಗತ್ಯ. ಮಕ್ಕಳು ಉತ್ತಮ ಶಿಕ್ಷಣ ಪಡೆಯವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ಹನುಮನಹಳ್ಳಿಯ ಪ್ರೌಢಶಾಲೆ ತಾಲೂಕಿನಲ್ಲಿ ಮಾದರಿ ಪ್ರೌಢಶಾಲೆ ಆಗಬೇಕಾಗಿದೆ. ಈ ಭಾಗದಲ್ಲಿ ಹಿಂದೆ ಬೆಳೆಯುತ್ತಿದ್ದ ಕಡಲೆಕಾಯಿ, ತೆಂಗು, ಭತ್ತ, ರಾಗಿಬಿತ್ತನೆ ತೊರೆದು ಈ ಭಾಗದಲ್ಲಿ ಅಡಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಇದರಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.
ವಿಧಾನ ಪರಿಷತ್​ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ತೊರೆದು ಉತ್ತಮ ಶಿಕ್ಷಣ ಪಡೆಯಬೇಕು. ಬಡತನ ನಾಳೆ ಯಶಸ್ವಿನ ಮೆಟ್ಟಿಲಾಗುತ್ತವೆ. ಹನುಮಹಳ್ಳಿಯಲ್ಲಿ ಬಹಳಷ್ಟು ಪ್ರತಿಭಾವಂತರು ಹುಟ್ಟಿ ಬೆಳೆದಿದ್ದು, ಈ ಗ್ರಾಮದಲ್ಲಿ 15ರಿಂದ 20 ಮಂದಿ ವೈದ್ಯರಿದ್ದಾರೆ. ಈ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಿರುವ ಗೋಪಾಲಕೃಷ್ಣ ಕುಟುಂಬವನ್ನು ಅಭಿನಂದಿಸಿದರು.
ಕಾರ್ಮಿಕ ಇಲಾಖೆ ಆಯುಕ್ತ ಡಾ.ಎಚ್​.ಎನ್​.ಗೋಪಾಲಕೃಷ್ಣ, ಶ್ರೀ ರಾಮ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎಚ್​.ಕೆ.ಗೋಪಾಲಕೃಷ್ಣ, ನಂದಗೋಪಾಲ್​, ವಕೀಲರಾದ ತಿಪ್ಪಯ್ಯ ಶೆಟ್ಟಿ, ದಯಾನಂದ ಇಂಜಿನಿಯರಿಂಗ್​ ಕಾಲೇಜಿನ ಉಪಪ್ರಾಂಶುಪಾಲ ರಾಮರಾಜು, ಮಧುಮೇಹ ತಜ್ಞ ಡಾ.ಕಾಶಿನಾಥ್​ ದೀಕ್ಷಿತ್​, ಪ್ರೊ.ದೇಶಮುಖ್​, ನಾಗರಾಜಯ್ಯ ಇತರರು ಇದ್ದರು.