ಪ್ರೌಢ ಶಾಲೆಗಳ ಸೈನ್ಸ್ ಲ್ಯಾಬ್ ಅಧ್ಯಯನ 
ರಾಜ್ಯ

ಪ್ರೌಢ ಶಾಲೆಗಳ ಸೈನ್ಸ್ ಲ್ಯಾಬ್ ಅಧ್ಯಯನಕ್ಕೆ ಮುಂದಾದ ಶಿಕ್ಷಣ ಇಲಾಖೆ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ಸರ್ಕಾರಿ ಹೈಸ್ಕೂಲ್‌ಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಬಳಕೆ ಕುರಿತು ರಾಜ್ಯಮಟ್ಟದ ಸಮಗ್ರ ಅಧ್ಯಯನ ನಡೆಸಲು ತೀರ್ಮಾನ
  • ಸರ್ಕಾರಿ ಶಾಲೆಗಳ ವಿಜ್ಞಾನ ಶಿಕ್ಷಣದ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು ಈ ಅಧ್ಯಯನದ ಉದ್ದೇಶ
  • ಈ ಅಧ್ಯಯನವು 8, 9 ಮತ್ತು 10ನೇ ತರಗತಿಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಉಪಯೋಗ, ಲಭ್ಯತೆ, ನಿರ್ವಹಣೆ ಹಾಗೂ ಬೋಧನಾ ಪರಿಣಾಮಕಾರಿತ್ವದ ಮೇಲೆ ಕೇಂದ್ರೀಕರಿಸಲಿದೆ.
ಬೆಂಗಳೂರು: ರಾಜ್ಯದ ಸರ್ಕಾರಿ ಹೈಸ್ಕೂಲ್‌ಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಬಳಕೆ ಕುರಿತು ರಾಜ್ಯಮಟ್ಟದ ಸಮಗ್ರ ಅಧ್ಯಯನ ನಡೆಸಲು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್ ಟಿ) ತೀರ್ಮಾನಿಸಿದೆ. ಸರ್ಕಾರಿ ಶಾಲೆಗಳ ವಿಜ್ಞಾನ ಶಿಕ್ಷಣದ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವುದು ಈ ಅಧ್ಯಯನದ ಉದ್ದೇಶವಾಗಿದೆ.
ಈ ಅಧ್ಯಯನವು 8, 9 ಮತ್ತು 10ನೇ ತರಗತಿಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳ ಉಪಯೋಗ, ಲಭ್ಯತೆ, ನಿರ್ವಹಣೆ ಹಾಗೂ ಬೋಧನಾ ಪರಿಣಾಮಕಾರಿತ್ವದ ಮೇಲೆ ಕೇಂದ್ರೀಕರಿಸಲಿದೆ.
ಅಧ್ಯಯನದ ಭಾಗವಾಗಿ ಪ್ರತಿ ಆಯ್ದ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಬೇಕು. ಪ್ರತಿ ತರಗತಿಯ ತಲಾ ಐವರು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯಿಂದ ಮಾಹಿತಿ ಪಡೆಯಬೇಕು. ಕ್ಷೇತ್ರಮಟ್ಟದ ಮೇಲ್ವಿಚಾರಣೆ ಮತ್ತು ಸಂಯೋಜನೆಗೆ ಬಿಆರ್‌ಪಿ, ಸಿಆರ್‌ಪಿ ಹಾಗೂ ಶಿಕ್ಷಣಾಧಿಕಾರಿಗಳ ಸಹಕಾರ ಪಡೆಯಲು ಸೂಚಿಸಲಾಗಿದೆ.
ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಅಗತ್ಯ ಸಹಕಾರ ನೀಡುವಂತೆ ನಿರ್ದೇಶನ ನೀಡಲಾಗಿದೆ. ಅಧ್ಯಯನಕ್ಕೆ ಸಂಬಂಧಿಸಿದ ತರಬೇತಿ ಹಾಗೂ ಸಮನ್ವಯ ಸಭೆಗಳು ಜ.12ರಿಂದ 20ರ ಅವಧಿಯಲ್ಲಿ ನಡೆಯಲಿದ್ದು, ಅಂತಿಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
ಈ ಅಧ್ಯಯನದ ಫಲಿತಾಂಶಗಳು ಮುಂದಿನ ದಿನಗಳಲ್ಲಿ ರಾಜ್ಯದ ವಿಜ್ಞಾನ ಶಿಕ್ಷಣ ಬಲಪಡಿಸುವ ನೀತಿನಿರ್ಣಯಗಳಿಗೆ ಮಾರ್ಗದರ್ಶಿಯಾಗಲಿವೆ ಎಂದು ಇಲಾಖೆ ತಿಳಿಸಿದೆ.