ಮಾಹಿತಿ ತಂತ್ರಜ್ಞಾನ ಶಿಕ್ಷಕರ ಪ್ರತ್ಯೇಕ ವೃಂದ’ ರಚನೆ 
ರಾಜ್ಯ

ಕೆಪಿಎಸ್ ಕಂಪ್ಯೂಟರ್ ಶಿಕ್ಷಣಕ್ಕೆ ಮಾಹಿತಿ ತಂತ್ರಜ್ಞಾನ ಶಿಕ್ಷಕರ ಪ್ರತ್ಯೇಕ ವೃಂದ ರಚಿಸಿದ ಶಿಕ್ಷಣ ಇಲಾಖೆ

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕರ ಮರು ಹೊಂದಾಣಿಕೆ ನಂತರ ಉಳಿದಿರುವ 6,117 ಪಿಎಸ್‌ಟಿ ಶಿಕ್ಷಕರಲ್ಲಿ 2,500 ಶಿಕ್ಷಕರನ್ನು ಮಾಹಿತಿ ತಂತ್ರಜ್ಞಾನ ಶಿಕ್ಷಕರಾಗಿ ಪರಿವರ್ತಿಸಲಾಗಿದೆ
  • ಮಾಹಿತಿ ತಂತ್ರಜ್ಞಾನ ಶಿಕ್ಷಕರಾಗಲು ಯಾವ ವಿದ್ಯಾರ್ಹತೆ ಪಡೆದಿರಬೇಕು, ಬಡ್ತಿ ಪ್ರಕ್ರಿಯೆ ಹೇಗಿರಲಿದೆ?, ಇಲಾಖೆಯಲ್ಲಿ ಮುಂದೆ ಯಾವೆಲ್ಲ ಹುದ್ದೆಗಳನ್ನು ಪಡೆಯಬಹುದು ಎಂಬುದರ ನಿಯಮಗಳನ್ನು ಇಲಾಖೆಯು ಇನ್ನಷ್ಟೇ ರೂಪಿಸಬೇಕಿದೆ
  • ಈ ಹುದ್ದೆಗಳ ವೇತನ ಶ್ರೇಣಿಗಳನ್ನು ಬದಲಾವಣೆ ಮಾಡಲಾಗಿದೆ. 41,300ರೂ.ಗಳಿಂದ 81,800 ರೂ.ಗಳಿದ್ದ ವೇತನ ಶ್ರೇಣಿಯನ್ನು 44,425ರಿಂದ83,700 ರೂ.ಗಳಿದ್ದ ವೇತನ ಶ್ರೇಣಿಗೆ ಬದಲಾವಣೆ
ಬೆಂಗಳೂರು: ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್)ಗಳಲ್ಲಿ ಕಂಪ್ಯೂಟರ್ ಶಿಕ್ಷಣ ಬೋಧನೆ ಮಾಡುವ ಉದ್ದೇಶದಿಂದ ಶಾಲಾ ಶಿಕ್ಷಣ ಇಲಾಖೆಯು ಇದೇ ಮೊದಲ ಬಾರಿಗೆ ‘ಮಾಹಿತಿ ತಂತ್ರಜ್ಞಾನ ಶಿಕ್ಷಕರ ಪ್ರತ್ಯೇಕ ವೃಂದ’ ರಚನೆಗೆ ಆದೇಶ ಹೊರಡಿಸಿದೆ.
ಶಿಕ್ಷಕರ ಮರು ಹೊಂದಾಣಿಕೆ ನಂತರ ಉಳಿದಿರುವ 6,117 ಪಿಎಸ್‌ಟಿ ಶಿಕ್ಷಕರಲ್ಲಿ 2,500 ಶಿಕ್ಷಕರನ್ನು ಮಾಹಿತಿ ತಂತ್ರಜ್ಞಾನ ಶಿಕ್ಷಕರಾಗಿ ಪರಿವರ್ತಿಸಲಾಗಿದೆ ಎಂದು  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಗುಣಮಟ್ಟದ ಶಿಕ್ಷಣ ನೀಡಲು ಇದೊಂದು ಮಹತ್ವದ ನಿರ್ಧಾರವಾಗಿದೆ. ಹೆಸರಿಗಷ್ಟೇ ಕಂಪ್ಯೂಟರ್ ಶಿಕ್ಷಣ ನೀಡುವ ಬದಲಾಗಿ, ಹುದ್ದೆಗೆ ಅರ್ಹತಾ ಶಿಕ್ಷಕರನ್ನು ನೇಮಿಸಿದಾಗ ಖಾಸಗಿ ಶಾಲೆಗಳಂತೆ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂಬ ಚಿಂತನೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಶಿಕ್ಷಕರ ಹುದ್ದೆ ರಚನೆಗೆ ಆದೇಶ ಹೊರಡಿಸಿದೆ. ಮಾಹಿತಿ ತಂತ್ರಜ್ಞಾನ ಶಿಕ್ಷಕರಾಗಲು ಯಾವ ವಿದ್ಯಾರ್ಹತೆ ಪಡೆದಿರಬೇಕು, ಬಡ್ತಿ ಪ್ರಕ್ರಿಯೆ ಹೇಗಿರಲಿದೆ?, ಇಲಾಖೆಯಲ್ಲಿ ಮುಂದೆ ಯಾವೆಲ್ಲ ಹುದ್ದೆಗಳನ್ನು ಪಡೆಯಬಹುದು ಎಂಬುದರ ನಿಯಮಗಳನ್ನು ಇಲಾಖೆಯು ಇನ್ನಷ್ಟೇ ರೂಪಿಸಬೇಕಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.


ಶಾಲಾ ಶಿಕ್ಷಣ ಇಲಾಖೆ ಪ್ರಸ್ತಾವನೆ:

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 500 ಮತ್ತು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ 200 ಸೇರಿ ಒಟ್ಟು 700 ಶಾಲೆಗಳನ್ನು ಕೆಪಿಎಸ್ ಆಗಿ ಉನ್ನತೀಕರಿಸಿಲಾಗಿದೆ. ಈ ಶಾಲೆಗಳಿಗೆ ಹೆಚ್ಚುವರಿ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಿಂದ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ಪರಿಚಯಿಸಲು ಆದೇಶಿಸಲಾಗಿದೆ. ಕೆಪಿಎಸ್ ಶಾಲೆಗಳ ಕಂಪ್ಯೂಟರ್ ಶಿಕ್ಷಕರ ಹುದ್ದೆಗಳನ್ನು ನೀಡಲು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವಂತೆ ಕೋರಿ ಶಾಲಾ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸರ್ಕಾರವು ಶಾಲಾ ಶಿಕ್ಷಣ ಇಲಾಖೆಯ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮರು ಹೊಂದಾಣಿಕೆ/ಮರು ಹಂಚಿಕೆಯ ನಂತರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಹೊಸದಾಗಿ 2,500 ಮಾಹಿತಿ ತಂತ್ರಜ್ಞಾನ ಶಿಕ್ಷಕರ ಹುದ್ದೆಗಳನ್ನಾಗಿ ಪರಿವರ್ತಿಸಲು ತೀರ್ಮಾನಿಸಿ ಆದೇಶ ಹೊರಡಿಸಿದೆ.

ಇತರೆ ಇಲಾಖೆಗಳ ಅನುಮತಿ:

ಶಾಲಾ ಶಿಕ್ಷಣ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿರುವ ಸರ್ಕಾರವು, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಯ ಇಲಾಖೆಗೆ ಅನುಮತಿ ಪಡೆದಿದೆ ಎಂದು ತಿಳಿಸಿದೆ.

ಶಿಕ್ಷಕರ ಮರು ಹಂಚಿಕೆ ಹೇಗೆ?

2017ನೇ ಸಾಲಿನಲ್ಲಿದ್ದ ಒಟ್ಟು 1,26,170 ಪಿಎಸ್‌ಟಿ ಶಿಕ್ಷಕರ ವೃಂದದಲ್ಲಿ 1,946 ಶಾಲಾ ಮಾತೆಯರ ಹುದ್ದೆಗಳು, 849 ಪದವೀಧರ ಶಿಕ್ಷಕರು ಹಾಗೂ 2 ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಮರು ಹಂಚಿಕೆ ಮಾಡಿ ಪಿಎಸ್‌ಟಿ ಶಿಕ್ಷಕರ ವೃಂದಕ್ಕೆ ಸೇರಿಸಲಾಗಿದೆ. 2022ರಲ್ಲಿ ಪಿಎಸ್‌ಟಿ ಶಿಕ್ಷಕರ ಒಟ್ಟು ವೃಂದ ಬಲವು 1,28,959 ಆಗಿತ್ತು. 2024ರಲ್ಲಿ ಬಲವು 1,20,707 ಆಗಿತ್ತು. ಇವುಗಳಲ್ಲಿ 6,117 ಪಿಎಸ್‌ಟಿ ಶಿಕ್ಷಕರ ಮೀಸಲು ಹುದ್ದೆಗಳಾಗಿರುತ್ತವೆ. ಈ ಹುದ್ದೆಗಳ ಹೆಸರಿನಲ್ಲಿ ಹೊಸ ಶಿಕ್ಷಕ ವೃಂದ ಸೃಷ್ಟಿಸಲಾಗಿದೆ.

ವೇತನ ಶ್ರೇಣಿ ಬದಲು 11 ಕೋಟಿ ರೂ. ಹೊರೆ:

ಕೆಪಿಎಸ್ ಶಾಲೆಗಳಿಗೆ ಅಂದಾಜು 2,500 ಕಂಪ್ಯುಟರ್ ಶಿಕ್ಷಕರ ಹುದ್ದೆಗಳನ್ನು ನೀಡಲು ನಿರ್ಧರಿಸಿದ್ದು, ಈ ಹುದ್ದೆಗಳ ವೇತನ ಶ್ರೇಣಿಗಳನ್ನು ಬದಲಾವಣೆ ಮಾಡಲಾಗಿದೆ. 41,300ರೂ.ಗಳಿಂದ 81,800 ರೂ.ಗಳಿದ್ದ ವೇತನ ಶ್ರೇಣಿಯನ್ನು 44,425ರಿಂದ83,700 ರೂ.ಗಳಿದ್ದ ವೇತನ ಶ್ರೇಣಿಗೆ ಬದಲಾವಣೆ ಮಾಡಲಾಗಿದೆ. ಇದರಿಂದಾಗಿ ಸರ್ಕಾರಕ್ಕೆ ವಾರ್ಷಿಕ 11.41 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಅಗತ್ಯವಿದೆ.
"

ಸರ್ಕಾರಿ ಶಾಲಾ ಮಕ್ಕಳಿಗೆ ಹೆಸರಿಗಷ್ಟೇ ಕಂಪ್ಯೂಟರ್ ಶಿಕ್ಷಣ ನೀಡದೆ, ತಂತ್ರಜ್ಞಾನ ಯುಗದಲ್ಲಿ ಆರಂಭದಿಂದಲೇ ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವೃಂದವನ್ನು ಸೃಷ್ಟಿಸಲಾಗಿದೆ. ಶಿಕ್ಷಕರ ನೇಮಕ ಹೇಗೆ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.

— - ವಿಕಾಸ್ ಕಿಶೋರ್ ಸುರಳ್ಕರ್, ಆಯುಕ್ತ, ಶಾಲಾ ಶಿಕ್ಷಣ ಇಲಾಖೆ