ಕೂಡ್ಲಿಗಿಯ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಚಾಲನೆ ನೀಡಿದರು. ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ತಾಪಂ ಇಒ ನರಸಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್.ವೆಂಕಟೇಶ್, ಪ್ರೌಢಶಾಲಾ ಬಡ್ತಿ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪಿ.ಡಿ.ರಂಗಪ್ಪ ಇತರರಿದ್ದರು.
- ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಭಿಮತ
- ಸನ್ಮಾನ ಕಾರ್ಯಕ್ರಮ
ಕೂಡ್ಲಿಗಿ: ಶಿಕ್ಷಕರ ಹೆಚ್ಚಿನ ಪರಿಶ್ರಮದಿಂದಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ಶ್ರೀಮತಿ ಅಂಗಡಿ ವೀರಮ್ಮ ತಿರುಕಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ.100 ಬಂದಿರುವ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ವಿಷಯ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು.
ಹಿಂದುಳಿದ ತಾಲೂಕಿನ ಹಣೆಪಟ್ಟಿ ಅಳಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಶ್ರಮ ಹಾಕಿ ಈ ಭಾಗದಲ್ಲಿನ ಬಡ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಪಣತೊಡಬೇಕು ಎಂದರು.
ಬಿಇಒ ಮೈಲೇಶ್ ಬೇವೂರು ಮಾತನಾಡಿ, ಶಿಕ್ಷಕರ ಸಂಘಟಿತ ಬೋಧನೆ ಮೂಲಕ ತಾಲೂಕಿಗೆ ಉತ್ತಮ ಫಲಿತಾಂಶ ಬಂದಿದೆ. ಮುಂದಿನ ವರ್ಷದ ಫಲಿತಾಂಶ ಇನ್ನೂ ಉತ್ತಮವಾಗಿಸಲು ವಿಷಯ ಶಿಕ್ಷಕರು ಈಗಿಂದಲೇ ಕಾರ್ಯಯೋಜನೆ ರೂಪಿಸಿ ವಿಧ್ಯಾರ್ಥಿಗಳಲ್ಲಿ ಓದುವ ಗೀಳನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳು, ಶೇ.100 ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ವಿಷಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕರಿಬಸಪ್ಪ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಮಹಮ್ಮದ್ ಜಿಲಾನ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ಕಾರ್ಯದರ್ಶಿ ಕೆ.ಎಚ್.ಎಂ.ಶಶಿಧರ, ಶಿಕ್ಷಣಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಅನಂತ ಕುಮಾರ್, ನಿವೃತ್ತ ಬಿಇಒ ಪದ್ಮನಾಭ ಕರಣಂ, ಪ್ರಾಚಾರ್ಯ ಎಸ್.ಷಣ್ಮುಖನ ಗೌಡ, ಬಿಸಿಯೂಟ ಯೋಜನಾಧಿಕಾರಿ ಕೆ.ಜಿ.ಆಂಜನೇಯ ಇತರರಿದ್ದರು.