ಜಾಗತಿಕ ಭೂಪಟದಲ್ಲಿ ಆರ್ಥಿಕ ಶಕ್ತಿಯಾಗಿ ವೇಗವಾಗಿ ಹೊರಹೊಮ್ಮುತ್ತಿರುವ ಭಾರತದ ಪಾಲಿಗೆ ಮಂಗಳವಾರ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಸುಮಾರು ಎರಡು ದಶಕಗಳ ಕಾಲ ನಡೆದ ಸುದೀರ್ಘ ಮಾತುಕತೆ, ಹತ್ತಾರು ಸುತ್ತಿನ ಸಮಾಲೋಚನೆಗಳು ಹಾಗೂ ರಾಜತಾಂತ್ರಿಕ ಸಂಘರ್ಷಗಳ ನಂತರ ಭಾರತ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಡುವೆ ಮುಕ್ತ ವ್ಯಾಪಾರ ಒಪ್ಪಂದ (ಎಫ್ಟಿಎ) ಅಂತಿಮಗೊಂಡಿದೆ. ಇದು ಕೇವಲ ಎರಡು ದೇಶಗಳ ನಡುವಿನ ಸರಕು ಮತ್ತು ಸೇವೆಗಳ ವಿನಿಮಯಕ್ಕೆ ಸಂಬಂಧಿಸಿದ ಒಪ್ಪಂದವಲ್ಲ; ಬದಲಾಗುತ್ತಿರುವ ಜಾಗತಿಕ ಸಮೀಕರಣದಲ್ಲಿ ಭಾರತದ ಪ್ರಭಾವಕ್ಕೆ ಸಂದ ಜಯ.
ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದ ವ್ಯಾಪಾರ ನೀತಿಗಳಲ್ಲಿ ಅನಿಶ್ಚಿತತೆ ಕಂಡುಬರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ, ಯುರೋಪ್ನಂತಹ ಸುಭದ್ರ ಮತ್ತು ಬೃಹತ್ ಮಾರುಕಟ್ಟೆ ಭಾರತಕ್ಕೆ ಸಂಪೂರ್ಣವಾಗಿ ತೆರೆದುಕೊಂಡಿರುವುದು ದೇಶದ ರಫ್ತುದಾರರಲ್ಲಿ ಹೊಸ ಆಶಾವಾದ ಮೂಡಿಸಿದೆ. ಈ ಒಪ್ಪಂದದಿಂದಾಗಿ ಭಾರತದ ಸಾಂಪ್ರದಾಯಿಕ ವಲಯಗಳಾದ ಜವಳಿ, ರಾಸಾಯನಿಕ, ಚರ್ವೇದ್ಯಮ ಹಾಗೂ ಕೃಷಿ ಉತ್ಪನ್ನಗಳಿಗೆ ಯುರೋಪ್ ಮಾರುಕಟ್ಟೆಯಲ್ಲಿ ಶೂನ್ಯ ಸುಂಕದ ರಿಯಾಯಿತಿ ದೊರೆಯಲಿದೆ. ಇದರಿಂದಾಗಿ ಭಾರತದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಜಾಗತಿಕ ಗುಣಮಟ್ಟದ ವೇದಿಕೆ ಲಭಿಸಲಿದ್ದು, ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಜಾಗತಿಕ ಮನ್ನಣೆ ಸಿಕ್ಕಂತಾಗುತ್ತದೆ.
ಮತ್ತೊಂದೆಡೆ, ಯುರೋಪಿಯನ್ ಒಕ್ಕೂಟದಲ್ಲಿನ 27 ರಾಷ್ಟ್ರಗಳು ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನ, ಸಂಶೋಧನಾ ಕೌಶಲ ಮತ್ತು ಹೇರಳವಾದ ಬಂಡವಾಳ ಈಗ ಭಾರತದತ್ತ ಸರಾಗವಾಗಿ ಹರಿಯಲು ಹಾದಿ ಸುಗಮವಾಗಿದೆ. ಭಾರತ ಇಂದು ತನ್ನ ಆರ್ಥಿಕ ನೀತಿಗಳಲ್ಲಿ ತರುತ್ತಿರುವ ಸುಧಾರಣೆಗಳಿಗೆ ಪೂರಕವಾಗಿ ಯುರೋಪಿಯನ್ ಹೂಡಿಕೆಗಳು ಹರಿದುಬಂದರೆ, ಅದು ಮೂಲಸೌಕರ್ಯ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗೆ ದೊಡ್ಡ ಕೊಡುಗೆ ನೀಡಲಿದೆ. ವಿಶೇಷವಾಗಿ ಹಸಿರು ಇಂಧನ, ಡಿಜಿಟಲ್ ಆರ್ಥಿಕತೆ ಮತ್ತು ಸುಸ್ಥಿರ ಅಭಿವೃದ್ಧಿಯ ಕ್ಷೇತ್ರಗಳಲ್ಲಿ ಯುರೋಪ್ನ ಸಹಯೋಗ ಭಾರತದ ಪರಿಸರಸ್ನೇಹಿ ಗುರಿಗಳಿಗೆ ಆನೆಬಲ ನೀಡಲಿದೆ.
ಚೀನಾ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಈ ಒಪ್ಪಂದದ ಮತ್ತೊಂದು ಆಯಾಮ. ಜಾಗತಿಕ ಪೂರೈಕೆ ಸರಪಳಿಯಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯಲು ಇಡೀ ವಿಶ್ವವೇ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ ಮತ್ತು ಯುರೋಪ್ ಕೈಜೋಡಿಸಿರುವುದು ಜಾಗತಿಕ ಆರ್ಥಿಕ ಸಮತೋಲನಕ್ಕೆ ದಿಕ್ಸೂಚಿಯಾಗಿದೆ. ಇದು ‘ಆತ್ಮನಿರ್ಭರ ಭಾರತ’ದ ಸಂಕಲ್ಪಕ್ಕೆ ವೇಗ ನೀಡುವುದಷ್ಟೇ ಅಲ್ಲದೆ, ಭಾರತ ಜಾಗತಿಕ ಉತ್ಪಾದನಾ ಹಬ್ ಆಗಿ ಮಾರ್ಪಡಲು ಅಗತ್ಯವಿರುವ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.
ಯಾವುದೇ ಒಪ್ಪಂದ ಕೇವಲ ಸಹಿ ಹಾಕುವುದರಿಂದ ಯಶಸ್ವಿಯಾಗುವುದಿಲ್ಲ. ಪರಸ್ಪರ ಹಿತಾಸಕ್ತಿಗಳನ್ನು ಗೌರವಿಸುತ್ತ, ಸ್ಥಳೀಯ ಮಾರುಕಟ್ಟೆಯ ಸೂಕ್ಷ್ಮತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಒಪ್ಪಂದವನ್ನು ಕಾರ್ಯಗತಗೊಳಿಸುವುದು ಉಭಯ ದೇಶಗಳ ಮುಂದಿರುವ ದೊಡ್ಡ ಸವಾಲು ಮತ್ತು ಜವಾಬ್ದಾರಿ. ಬಲಿಷ್ಠ ಭಾರತದ ನಿರ್ವಣಕ್ಕೆ ಈ ಆರ್ಥಿಕ ಮೈತ್ರಿ ಅಡಿಪಾಯವಾಗಲಿ.