ಸಾಂದರ್ಭಿಕ ಚಿತ್ರ 
ರಾಜ್ಯ

ಸಂಪಾದಕೀಯ| ಮಕ್ಕಳ ರಕ್ಷಣೆಯ ಸವಾಲು

ಸಮಾಜದ ಮುಗ್ಧ ಹಾಗೂ ಅಸಹಾಯಕ ವರ್ಗವಾದ ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ. ರಾಜ್ಯದಲ್ಲಿ ಪ್ರತಿನಿತ್ಯ ಸರಾಸರಿ 12 ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ ಎಂಬ ಸಂಗತಿ ನಿಜಕ್ಕೂ ಆತಂಕಕಾರಿ. ಮಕ್ಕಳ ರಕ್ಷಣೆಗಾಗಿ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ, ವರ್ಷದಿಂದ ವರ್ಷಕ್ಕೆ ದೌರ್ಜನ್ಯ ಪ್ರಕರಣಗಳು ಶೇಕಡ 5ರಿಂದ 6ರಷ್ಟು ಹೆಚ್ಚಾಗುತ್ತಿರುವುದು ಗಂಭೀರ ಚಿಂತನೆಗೆ ಹಚ್ಚುವ ವಿಷಯವಾಗಿದೆ. 2023ರಲ್ಲಿ 3,902 ಇದ್ದ ಪ್ರಕರಣಗಳ ಸಂಖ್ಯೆ 2025ರ ವೇಳೆಗೆ 4,324ಕ್ಕೆ ಏರಿಕೆಯಾಗಿದೆ; 2026ರ ಜುಲೈವರೆಗಿನ ಅವಧಿಯಲ್ಲೇ 2,936 ಪ್ರಕರಣಗಳು ವರದಿಯಾಗಿವೆ. ಈ ಅಂಕಿ-ಅಂಶಗಳು ದಾಖಲಾದ ಪ್ರಕರಣಗಳ ಚಿತ್ರಣವನ್ನು ಮಾತ್ರ ನೀಡುತ್ತವೆ. ವಾಸ್ತವದಲ್ಲಿ, ಬೆಳಕಿಗೆ ಬರದ ಪ್ರಕರಣಗಳ ಸಂಖ್ಯೆ ಇದಕ್ಕಿಂತ ಹಲವು ಪಟ್ಟು ಹೆಚ್ಚಿರುವ ಸಾಧ್ಯತೆಯಿದೆ. ಕಳವಳಕಾರಿ ಸಂಗತಿಯೆಂದರೆ, ಬಹುಪಾಲು ದೌರ್ಜನ್ಯಗಳು ಮಕ್ಕಳಿಗೆ ಆಪ್ತರಾದ ಪರಿಚಯಸ್ಥರು, ಸಂಬಂಧಿಕರು ಹಾಗೂ ನೆರೆಹೊರೆಯವರಿಂದಲೇ ನಡೆಯುತ್ತಿವೆ. ಮಕ್ಕಳು ಯಾರನ್ನು ನಂಬಿ ಸುರಕ್ಷಿತವಾಗಿರಬೇಕೋ, ಅವರಿಂದಲೇ ಶೋಷಣೆಗೆ ಒಳಗಾಗುತ್ತಿರುವುದು ಸಾಮಾಜಿಕ ಮೌಲ್ಯಗಳ ಅಧಃಪತನವನ್ನು ಸೂಚಿಸುತ್ತದೆ. ರಾಜ್ಯದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದರ ಕುರಿತು ‘ವಿಜಯವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿದ ಬಳಿಕ, ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರವು ಶಾಲಾ ಶಿಕ್ಷಣ ಇಲಾಖೆಗೆ ಇತ್ತೀಚೆಗೆ ಪತ್ರ ಬರೆದು, ಶಿಕ್ಷಣ ಇಲಾಖೆಯು ಎಲ್ಲ ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸೂಚಿಸಿರುವುದು, ಸಮಾಧಾನಕರ ಬೆಳವಣಿಗೆ.

ಪ್ರಕರಣ ದಾಖಲಾದ ನಂತರ ತನಿಖೆಯಲ್ಲಿ ಆಗುವ ವಿಳಂಬ, ಸಾಕ್ಷ್ಯಾಧಾರಗಳ ಕೊರತೆ ಮತ್ತು ವಿಶೇಷ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಸಾವಿರಾರು ಪ್ರಕರಣಗಳಿಂದಾಗಿ ಅಪರಾಧಿಗಳಿಗೆ ಶೀಘ್ರ ಶಿಕ್ಷೆಯಾಗುತ್ತಿಲ್ಲ. ವಿಳಂಬವಾದ ನ್ಯಾಯ, ನ್ಯಾಯ ನಿರಾಕರಣೆಗೆ ಸಮ ಎಂಬಂತೆ, ಶಿಕ್ಷೆಯ ಪ್ರಮಾಣ ಕಡಿಮೆಯಾದಾಗ ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದಂತಾಗುತ್ತದೆ. ಪೋಕ್ಸೋ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಅಥವಾ ನ್ಯಾಯಾಂಗದಿಂದ ಮಾತ್ರ ಸಾಧ್ಯವಿಲ್ಲ; ಇದಕ್ಕೆ ಸಮಗ್ರ ಸಾಮಾಜಿಕ ಆಂದೋಲನದ ಅಗತ್ಯವಿದೆ. ಮೊದಲನೆಯದಾಗಿ, ಶಾಲಾ ಹಂತದಿಂದಲೇ ಮಕ್ಕಳಿಗೆ ಗುಡ್ ಟಚ್ ಮತ್ತು ಬ್ಯಾಡ್ ಟಚ್ (ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶ) ಕುರಿತು ವೈಜ್ಞಾನಿಕವಾಗಿ ಹಾಗೂ ಮುಕ್ತವಾಗಿ ಅರಿವು ಮೂಡಿಸಬೇಕು. ಪಾಲಕರು ತಮ್ಮ ಮಕ್ಕಳೊಂದಿಗೆ ಸ್ನೇಹಿತರಂತೆ ಬೆರೆತು, ಅವರು ಯಾವುದೇ ಭಯವಿಲ್ಲದೆ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಂತಹ ವಾತಾವರಣವನ್ನು ಮನೆಯಲ್ಲಿ ನಿರ್ವಿುಸಬೇಕು.

ಎರಡನೆಯದಾಗಿ, ಇಂದಿನ ಡಿಜಿಟಲ್ ಯುಗದಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಕ್ಕಳ ಮೇಲೆ ನಡೆಯುತ್ತಿರುವ ಸೈಬರ್ ಲೈಂಗಿಕ ಶೋಷಣೆಯ ಬಗ್ಗೆ ಪಾಲಕರು ತೀವ್ರ ನಿಗಾ ವಹಿಸಬೇಕು. ಸರ್ಕಾರವು ವಿಶೇಷ ತ್ವರಿತ ನ್ಯಾಯಾಲಯಗಳ ಸಂಖ್ಯೆಯನ್ನು ಹೆಚ್ಚಿಸಿ, ಕಾಲಮಿತಿಯೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ, ಸಂತ್ರಸ್ತ ಮಕ್ಕಳಿಗೆ ಸೂಕ್ತ ಆಪ್ತಸಮಾಲೋಚನೆ ಮತ್ತು ಪುನರ್ವಸತಿ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ಸಮಾಜ, ಪಾಲಕರು ಮತ್ತು ಸರ್ಕಾರ ಒಟ್ಟಾಗಿ ಎಚ್ಚೆತ್ತುಕೊಂಡಾಗ ಮಾತ್ರ ಮಕ್ಕಳಿಗೆ ಸುರಕ್ಷಿತ ನಾಳೆಗಳನ್ನು ಕಟ್ಟಿಕೊಡಲು ಸಾಧ್ಯ.