ಕನ್ನಡ ಭಾಷೆಯ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯದಲ್ಲಿ ಕಾಯ್ದೆಗಳೇನೋ ಇವೆ. ಆದರೆ ಅವುಗಳ ಪರಿಣಾಮಕಾರಿ ಅನುಷ್ಠಾನ ಮಾತ್ರ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ. 1994ರಲ್ಲಿ ಕನ್ನಡ ಭಾಷಾ ಕಲಿಕೆ ಮತ್ತು ಬಳಕೆಗೆ ಸಂಬಂಧಿಸಿದ ಕಾಯ್ದೆ ಜಾರಿಯಾಗಿದ್ದರೆ, 2022ರಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಜಾರಿಗೆ ಬಂದಿದೆ. ಮೂರು ದಶಕಗಳ ಅಂತರದಲ್ಲಿ ಎರಡು ಪ್ರಮುಖ ಕಾನೂನುಗಳು ರೂಪುಗೊಂಡಿದ್ದರೂ ಕನ್ನಡದ ಬಳಕೆ ಎಲ್ಲ ಕ್ಷೇತ್ರಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಿಲ್ಲ ಎಂಬುದು ವಾಸ್ತವ.
ಶಿಕ್ಷಣ, ಆಡಳಿತ, ಉದ್ಯೋಗ, ವ್ಯಾಪಾರ, ಸಾರ್ವಜನಿಕ ಸೇವೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕನ್ನಡಕ್ಕೆ ಆದ್ಯತೆ ದೊರೆಯಬೇಕು ಎಂಬುದು ಈ ಕಾಯ್ದೆಗಳ ಆಶಯ. ಆದರೆ ಕಾನೂನು ರೂಪಿಸುವುದಕ್ಕೂ ಅದನ್ನು ನೆಲಮಟ್ಟದಲ್ಲಿ ಜಾರಿಗೊಳಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಸರ್ಕಾರಿ ಕಚೇರಿಗಳಲ್ಲೇ ಕನ್ನಡದಲ್ಲಿ ಅರ್ಜಿ ಸ್ವೀಕರಿಸಲು, ಮಾಹಿತಿ ನೀಡಲು ಮತ್ತು ಪತ್ರ ವ್ಯವಹಾರ ನಡೆಸಲು ಹಿಂದೇಟು ಹಾಕುವ ಸಂದರ್ಭಗಳಿವೆ. ಬ್ಯಾಂಕ್ಗಳು, ವಿಮಾ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಖಾಸಗಿ ವಾಣಿಜ್ಯ ಸಂಸ್ಥೆಗಳಲ್ಲೂ ಕನ್ನಡದ ಬಳಕೆ ಸಮರ್ಪಕವಾಗಿಲ್ಲ. ಅಂಗಡಿ, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ನಿಯಮವೂ ಎಲ್ಲೆಡೆ ಪಾಲನೆಯಾಗುತ್ತಿಲ್ಲ.
ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯಲ್ಲಿ ಕನ್ನಡದ ಬಳಕೆಗೆ ಸಂಬಂಧಿಸಿದ ಹಲವು ಮಹತ್ವದ ಅಂಶಗಳಿವೆ. ಆದರೆ ಅವುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮತ್ತು ನಿಯಮ ಪಾಲನೆಯಾಗುವಂತೆ ನೋಡಿಕೊಳ್ಳುವ ಕೆಲಸ ಸಮರ್ಪಕವಾಗಿ ನಡೆಯಬೇಕು. ಯಾವ ಇಲಾಖೆಯ ಜವಾಬ್ದಾರಿ ಏನು, ನಿಯಮ ಉಲ್ಲಂಘನೆಯಾದರೆ ಯಾರಿಗೆ ದೂರು ನೀಡಬೇಕು, ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಕೇವಲ ಆದೇಶ ಹೊರಡಿಸಿ ಕೈತೊಳೆದುಕೊಳ್ಳುವ ಪ್ರವೃತ್ತಿ ಸಲ್ಲದು. ಕಾಯ್ದೆಯ ಅನುಷ್ಠಾನಕ್ಕೆ ಪ್ರತ್ಯೇಕ ಮೇಲ್ವಿಚಾರಣಾ ವ್ಯವಸ್ಥೆ ರೂಪಿಸಿ, ನಿಗದಿತ ಅವಧಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಬೇಕು.
ಕನ್ನಡದ ಅಭಿವೃದ್ಧಿ ಎಂದರೆ ಇತರ ಭಾಷೆಗಳನ್ನು ವಿರೋಧಿಸುವುದಲ್ಲ. ಕರ್ನಾಟಕದಲ್ಲಿ ನೆಲೆಸಿರುವ ಎಲ್ಲರಿಗೂ ಕನ್ನಡ ಕಲಿಯಲು ಮತ್ತು ಬಳಸಲು ಅನುಕೂಲಕರ ವಾತಾವರಣ ನಿರ್ವಿುಸುವುದು. ಸ್ಥಳೀಯ ಭಾಷೆಯಲ್ಲೇ ಜನರಿಗೆ ಆಡಳಿತ ಮತ್ತು ಸಾರ್ವಜನಿಕ ಸೇವೆಗಳು ದೊರೆಯುವುದು ಪ್ರಜಾಪ್ರಭುತ್ವದ ಮೂಲ ಆಶಯವೂ ಹೌದು. ಕನ್ನಡ ಕಲಿಕೆಗೆ ಗುಣಮಟ್ಟದ ಪಠ್ಯಕ್ರಮ, ಶಿಕ್ಷಕರು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದೂ ಸರ್ಕಾರದ ಹೊಣೆಗಾರಿಕೆ.
ಕನ್ನಡಿಗರು ತಮ್ಮ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೈಜೋಡಿಸಬೇಕು. ಅದಕ್ಕಿಂತ ಮುಖ್ಯವಾಗಿ, ಸರ್ಕಾರ ತನ್ನದೇ ಕಾಯ್ದೆಗಳನ್ನು ಪ್ರಾಮಾಣಿಕವಾಗಿ ಮತ್ತು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕನ್ನಡದ ರಕ್ಷಣೆ ಕೇವಲ ಭಾಷಣ, ಘೊಷಣೆ ಮತ್ತು ಉತ್ಸವಗಳಿಗೆ ಸೀಮಿತವಾಗಬಾರದು. ಕಾಯ್ದೆಗಳ ಆಶಯ ಜನರ ಬದುಕಿನಲ್ಲಿ ಪ್ರತಿಫಲಿಸಿದಾಗ ಮಾತ್ರ ಅವುಗಳಿಗೆ ನಿಜವಾದ ಅರ್ಥ ಬರುತ್ತದೆ.