Editorial 
ರಾಜ್ಯ

ಸಂಪಾದಕೀಯ: ಆಘಾತಕಾರಿ, ನಾಚಿಕೆಗೇಡು

ಮಣಿಕಂಠ ಪಾ ಹಿರೇಮಠ
ವ್ಯಕ್ತಿಯ ಭವಿಷ್ಯ ರೂಪಿಸುವಲ್ಲಿ ಮತ್ತು ನಾಡಿಗೆ ಉತ್ತಮ ನಾಗರಿಕರನ್ನು ಕೊಡುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಹೀಗಾಗಿ, ಈ ರಂಗವನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಯಾವುದೇ ರಂಗವು ಪಾರದರ್ಶಕತೆ ಕಾಪಾಡಿಕೊಂಡು ಹೋಗುವ ನಿಟ್ಟಿನಲ್ಲಿ ನೀತಿನಿಯಮಗಳು ಪ್ರಾಮುಖ್ಯ ಪಡೆಯುತ್ತವೆ. ಕಾನೂನು ಕಟ್ಟಳೆಗಳು ಇದ್ದರೂ ರಂಗೋಲಿ ಕೆಳಗೆ ನುಸುಳುವವರು ಎಲ್ಲ ಕಡೆಯೂ ಇರುತ್ತಾರೆ. ಇಂಥ ಕೆಲವರಿಂದಾಗಿ ಒಟ್ಟಾರೆ ವ್ಯವಸ್ಥೆಯ ಮೇಲೇ ಸಂಶಯದ ನೆರಳು ಕವಿಯುವಂತಾಗುತ್ತದೆ. ರಾಜ್ಯದಲ್ಲಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕೆಲಸ ಉಳಿಸಿಕೊಳ್ಳುವುದಕ್ಕಾಗಿ 249 ಅತಿಥಿ ಉಪನ್ಯಾಸಕರು ನಕಲಿ ಪಿಎಚ್.ಡಿ ಪ್ರಮಾಣಪತ್ರ ನೀಡಿರುವ ಆಘಾತಕಾರಿ ಸಂಗತಿ ಈಗ ಬಯಲಾಗಿದೆ.
ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಲು ಸಂಬಂಧಪಟ್ಟ ವಿಷಯದಲ್ಲಿ ನೆಟ್, ಕೆ-ಸೆಟ್ ಅಥವಾ ಪಿಎಚ್.ಡಿ ಪದವೀಧರರಾಗಿರಬೇಕೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ನಿಯಮ ರೂಪಿಸಿದೆ. 2025-26ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿರುವ ಅತಿಥಿ ಉಪನ್ಯಾಸಕರ ಪಿಎಚ್.ಡಿ ಪ್ರಮಾಣಪತ್ರಗಳ ನೈಜತೆ ಪರಿಶೀಲಿಸಿದಾಗ, ನಕಲಿ/ಅಮಾನ್ಯ ಪ್ರಮಾಣಪತ್ರ ಸಲ್ಲಿಸಿರುವುದು ಬಹಿರಂಗಗೊಂಡಿದೆ. ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ನೀಡಿದ್ದ ಪ್ರಮಾಣಪತ್ರಗಳ ನೈಜತೆ ವರದಿಯನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯ/ಸಂಸ್ಥೆಗಳಿಂದ ತರಿಸಿಕೊಂಡಾಗ ಈ ಕಳ್ಳಾಟ ಸಿಕ್ಕಿಬಿದ್ದಿದೆ.
ರಾಜ್ಯದಲ್ಲಿ ಒಟ್ಟು 10,335 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ಪದವಿ ಕಾಲೇಜೊಂದರಲ್ಲೇ 20 ಮಂದಿ ನಕಲಿ ಪಿಎಚ್.ಡಿ ಪದವೀಧರರು ಪತ್ತೆಯಾಗಿದ್ದಾರೆ. ನಕಲಿ ಪಿಎಚ್.ಡಿ ಸರ್ಟಿಫಿಕೇಟ್ ನೀಡಿರುವುದರಲ್ಲಿ ಹೊರರಾಜ್ಯದ ವಿಶ್ವವಿದ್ಯಾಲಯಗಳೇ ಜಾಸ್ತಿಯಿವೆ. ಹಾಗೇ, ಇನ್ನೂ ಸುಮಾರು 500 ಮಂದಿ ಹೊರರಾಜ್ಯಗಳಿಂದ ನಕಲಿ ಪಿಎಚ್.ಡಿ ಸರ್ಟಿಫಿಕೇಟ್ ತಂದಿದ್ದಾರೆಂಬ ಮಾಹಿತಿ ಲಭಿಸಿದೆ. ಹೀಗಾಗಿ ಹೊರರಾಜ್ಯದ ಪಿಎಚ್.ಡಿ. ನೈಜತೆ ಪರಿಶೀಲನೆಗೂ ರಾಜ್ಯದ ಶಿಕ್ಷಣ ಇಲಾಖೆ ಮುಂದಾಗಿದೆ. ಅಂದರೆ ಈ ಅಕ್ರಮದ ಆಳ ಇನ್ನಷ್ಟು ಇದೆಯೆಂಬುದು ಖಚಿತ. ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಜತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಡಲು ಕಾಲೇಜು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮುಂದೆ ಇಂಥ ಅಪಸವ್ಯಕ್ಕೆ ಆಸ್ಪದವಿರದಂತೆ ಪಾಠ ಕಲಿಸಲಿ. ಶಿಕ್ಷಣ ಕ್ಷೇತ್ರವು ಮೊದಲೇ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಹಾಗಿರುವಾಗ, ಇಂಥ ಕಾನೂನುಬಾಹಿರ ಚಟುವಟಿಕೆಗಳು ಈ ರಂಗದ ಇಮೇಜನ್ನು ಮತ್ತಷ್ಟು ಹಾಳುಮಾಡುತ್ತವೆ. ಶಾಲಾಕಾಲೇಜುಗಳಲ್ಲಿ ಬೋಧನೆ ಮಾಡುವವರು ನೀತಿಸಂಹಿತೆಯ ಚೌಕಟ್ಟಿಗೆ ಒಳಪಡಬೇಕಾಗುತ್ತದೆ. ತಾವೇ ಹಾದಿತಪ್ಪಿದಲ್ಲಿ ನಾಳಿನ ನಾಗರಿಕರಾದ ವಿದ್ಯಾರ್ಥಿಗಳಿಗೆ ಪಾಠ ಹೇಳುವ ನೈತಿಕ ಶಕ್ತಿ ಇವರಿಗೆಲ್ಲಿರುತ್ತದೆ? ಉತ್ತಮ ಶಿಕ್ಷಣ ಪಡೆದು, ಮುಂದೆ ನೌಕರಿ ಹಿಡಿದು ಬದುಕನ್ನು ರೂಪಿಸಿಕೊಳ್ಳಬೇಕು ಎಂಬುದು ಬಹುತೇಕರ ಕನಸಾಗಿರುತ್ತದೆ. ಆದ್ದರಿಂದ, ಇವತ್ತಿನ ದುಬಾರಿ ಕಾಲದಲ್ಲೂ ಪಾಲಕರು ಸಾಲಸೋಲ ಮಾಡಿಯಾದರೂ ಮಕ್ಕಳನ್ನು ಓದಿಸುತ್ತಾರೆ. ಶಿಕ್ಷಣ ವ್ಯವಸ್ಥೆಯು ಜನರ ಆಶಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬೋಧಕರ ಮೇಲೂ ಹೊಣೆಗಾರಿಕೆಯಿದೆ.