ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಉದ್ದೇಶಿತ ‘ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಮಸೂದೆ, 2025’ ಒಂದು ಮಹತ್ವದ ಹೆಜ್ಜೆಯಾಗಿದೆ. ಸಮಾಜದಲ್ಲಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಮೀರಿ ವರ್ತಿಸುವುದಕ್ಕೆ ಈ ಶಾಸನ ಕಡಿವಾಣ ಹಾಕಲಿದೆ. ಸಾಮಾಜಿಕ ಬಹಿಷ್ಕಾರವೆಂಬುದು ರಾಜ್ಯದ ಹಳ್ಳಿ ಮತ್ತು ಪಟ್ಟಣಗಳಲ್ಲಿ ಇಂದಿಗೂ ಜೀವಂತವಿರುವ ಒಂದು ಕ್ರೂರ ದಬ್ಬಾಳಿಕೆಯ ಅಸ್ತ್ರವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ಈಗಾಗಲೇ ಇಂತಹ ಬಹಿಷ್ಕಾರಗಳನ್ನು ಅಪರಾಧವೆಂದು ಪರಿಗಣಿಸಿದೆ.
2015ರ ತಿದ್ದುಪಡಿಯಲ್ಲಂತೂ ಬಹಿಷ್ಕಾರವನ್ನು ಹೆಚ್ಚು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಹೀಗಿರುವಾಗ ಪ್ರತ್ಯೇಕ ಕಾನೂನಿನ ಅಗತ್ಯವೇನು ಎಂದು ಕೆಲವರು ಪ್ರಶ್ನಿಸಬಹುದು. ಆ ಕಾನೂನು ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ಮಾತ್ರ ರಕ್ಷಿಸುತ್ತದೆ. ವಾಸ್ತವದಲ್ಲಿ, ಸಾಮಾಜಿಕ ಬಹಿಷ್ಕಾರವು ಜಾತಿ ಮತ್ತು ಸಮುದಾಯಗಳನ್ನು ಮೀರಿ ನಡೆಯುತ್ತಿದೆ; ಅಂತರ್ಜಾತಿ ವಿವಾಹಗಳು, ಆಸ್ತಿ ವಿವಾದಗಳು, ಸ್ಥಳೀಯ ಶ್ರೇಣೀಕೃತ ವ್ಯವಸ್ಥೆಯ ಉಲ್ಲಂಘನೆ, ವೈಯಕ್ತಿಕ ಸ್ವಾತಂತ್ರ್ಯದ ಪ್ರಬಲ ಪ್ರತಿಪಾದನೆ ಮುಂತಾದವು ಈ ಬಹಿಷ್ಕಾರಕ್ಕೆ ಕಾರಣಗಳಾಗುತ್ತಿವೆ. ಈ ಕೊರತೆಯನ್ನು ನೀಗಿಸಲು ಎಲ್ಲ ಸಮುದಾಯಗಳಿಗೂ ಅನ್ವಯವಾಗುವಂತಹ ಒಂದು ಕಾನೂನಿನ ಅವಶ್ಯಕತೆ ಇತ್ತು. ಮಹಾರಾಷ್ಟ್ರದ ರಾಜಕೀಯ ನಾಯಕರು ಸುಮಾರು ಒಂದು ದಶಕದ ಹಿಂದೆಯೇ ಇಂತಹ ಹೊಸ ಕಾನೂನಿನ ಅಗತ್ಯವನ್ನು ಗುರುತಿಸಿದ್ದರು. ಕರ್ನಾಟಕ ತುಸು ತಡವಾಗಿಯಾದರೂ ಇದನ್ನು ತರಲು ಹೊರಟಿರುವುದು ಸೂಕ್ತವಾಗಿದೆ.
ಇತ್ತೀಚಿನ ಕೆಲವು ಘಟನೆಗಳು ಇದಕ್ಕೆ ಪ್ರೇರಣೆಯಾಗಿವೆ. ಶಿವಮೊಗ್ಗದಲ್ಲಿ ಅಂತರ್ಜಾತಿ ವಿವಾಹವಾದ ಕಾರಣ ಜೋಗಿ ಸಮುದಾಯದ ಕುಟುಂಬವೊಂದಕ್ಕೆ ಬಹಿಷ್ಕಾರ ಹಾಕಿ ದಂಡ ವಿಧಿಸಲಾಗಿತ್ತು. ಚಿತ್ರದುರ್ಗದಲ್ಲಿ ವಿಕಲಾಂಗ ದಂಪತಿಗೆ ಬಹಿಷ್ಕಾರ ಹಾಕಿದ್ದಲ್ಲದೆ ಅವರಿಗೆ ಆಶ್ರಯ ನೀಡಿದ್ದಕ್ಕಾಗಿ ಮಹಿಳೆಯ ಪಾಲಕರಿಗೆ ದಂಡ ವಿಧಿಸಿರುವ ಘಟನೆ ನಡೆದಿದೆ. ಯಾದಗಿರಿಯಲ್ಲಿ ಪೊಲೀಸರಿಗೆ ನೀಡಿದ್ದ ಪೋಕ್ಸೋ ಸಂಬಂಧಿತ ದೂರನ್ನು ಹಿಂಪಡೆಯಲು ನಿರಾಕರಿಸಿದ ಕಾರಣಕ್ಕಾಗಿ ಸುಮಾರು 250 ದಲಿತರಿಗೆ ಅಂಗಡಿ, ದೇವಾಲಯ ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರಾಕರಿಸಿದ ಪ್ರಸಂಗವೂ ನಡೆದಿದೆ. ಇವು ನಾಗರಿಕರ ಘನತೆ ಮತ್ತು ಜೀವನೋಪಾಯವನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಪ್ರಯತ್ನಗಳು. ಅದಕ್ಕಾಗಿಯೇ ಈ ಮಸೂದೆಯಲ್ಲಿ ‘ಸಾಮಾಜಿಕ ಬಹಿಷ್ಕಾರ’ ಎಂಬ ಪದಗುಚ್ಛಕ್ಕೆ ವಿಸõತ ವ್ಯಾಖ್ಯಾನ ಅಳವಡಿಸಲಾಗಿದೆ.
ಸಾರ್ವಜನಿಕ ಅಥವಾ ಧಾರ್ವಿುಕ ಸ್ಥಳಗಳ ಪ್ರವೇಶ ನಿರಾಕರಣೆ, ಸಮುದಾಯ ಜೀವನದಿಂದ ದೂರ ಇಡುವುದು, ವ್ಯಾಪಾರ ಅಥವಾ ಉದ್ಯೋಗಕ್ಕೆ ಅಡ್ಡಿಪಡಿಸುವುದು, ವೇಷಭೂಷಣ ಅಥವಾ ಭಾಷೆಯನ್ನು ಹೇರುವುದು, ಅಂತ್ಯಕ್ರಿಯೆ ಅಥವಾ ಪೂಜೆಗೆ ನಿರ್ಬಂಧ ಹಾಕುವುದು ಸೇರಿದಂತೆ ಸುಮಾರು 20 ಅಂಶಗಳನ್ನು ಈ ಮಸೂದೆಯಲ್ಲಿ ಪಟ್ಟಿ ಮಾಡಲಾಗಿದೆ. ಇಂತಹ ಕೃತ್ಯಗಳಿಗೆ ಜೈಲು ಶಿಕ್ಷೆ ಮತ್ತು ದಂಡವನ್ನೂ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಮೇಲ್ವಿಚಾರಣೆಗಾಗಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ಅಧಿಕಾರಿ’ಯ ನೇಮಕಕ್ಕೂ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಮಸೂದೆ ಶ್ಲಾಘನಾರ್ಹವಾಗಿದೆ. ಆದರೂ, ಕೇವಲ ಕಾನೂನಿನಿಂದ ಸಾಮಾಜಿಕ ದಬ್ಬಾಳಿಕೆಯನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎನ್ನುವುದನ್ನು ಎಲ್ಲರೂ ನೆನಪಿಡಬೇಕಿದೆ. ಸಾರ್ವಜನಿಕರ ಮನೋಭಾವದಲ್ಲಿಯೂ ಬದಲಾವಣೆ ಆಗಬೇಕಿದೆ. ಇದೇ ವೇಳೆ, ಈ ಶಾಸನವನ್ನು ಯಾರೂ ಎಂದಿಗೂ ಸೇಡಿನ ಆಯುಧವಾಗಿ ಮಾಡಿಕೊಳ್ಳದಂತೆ ಎಚ್ಚರ ವಹಿಸಬೇಕಿದೆ.