WEB
ರಾಜ್ಯ

ಸಂಪಾದಕೀಯ: ರೈತರ ಕಷ್ಟಗಳಿಗೆ ಸ್ಪಂದಿಸಿ

ಕರ್ನಾಟಕದ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ರಾಜ್ಯದ 177 ತಾಲೂಕುಗಳನ್ನು ಬರಪೀಡಿತ ಎಂದು ಘೊಷಿಸಲಾಗಿದ್ದು, ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆಯ 852 ಮಿಮೀಗೆ ಬದಲಾಗಿ 642 ಮಿಮೀ ಮಳೆಯಾಗಿದ್ದು, ಶೇ. 36ರಷ್ಟು ಕೊರತೆ ದಾಖಲಾಗಿದೆ. ಇನ್ನಷ್ಟು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ.

ಕರ್ನಾಟಕದ ಬರ ಪರಿಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ರಾಜ್ಯದ 177 ತಾಲೂಕುಗಳನ್ನು ಬರಪೀಡಿತ ಎಂದು ಘೊಷಿಸಲಾಗಿದ್ದು, ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆಯ 852 ಮಿಮೀಗೆ ಬದಲಾಗಿ 642 ಮಿಮೀ ಮಳೆಯಾಗಿದ್ದು, ಶೇ. 36ರಷ್ಟು ಕೊರತೆ ದಾಖಲಾಗಿದೆ. ಇನ್ನಷ್ಟು ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರುವ ಸಾಧ್ಯತೆಯಿದೆ.

ಇದರ ನೇರ ಹೊಡೆತ ರೈತರ ಬೆಳೆಗಳ ಮೇಲೆ ಬಿದ್ದಿದೆ. ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಬೆಳೆ ಒಣಗುವುದನ್ನು ಕಣ್ಣಾರೆ ನೋಡುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಿತ್ತನೆ ಬೀಜ, ಗೊಬ್ಬರ, ಕೂಲಿ, ಉಳುಮೆ ಸೇರಿದಂತೆ ಈಗಾಗಲೇ ಮಾಡಿದ ಖರ್ಚು ಕೈಗೂಡದ ಆತಂಕವೂ ಇದೆ. ಬೆಳೆ ನಷ್ಟದ ಜತೆಗೆ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುತ್ತಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಮೇಲೂ ಒತ್ತಡ ಹೆಚ್ಚಿಸಬಹುದು ಎಂಬುದು ಆತಂಕಕ್ಕೆ ಕಾರಣವಾಗಿದೆ.

ಇಂತಹ ಸಂದರ್ಭದಲ್ಲಿ ರೈತನಿಗೆ ಮೊದಲು ಬೇಕಿರುವುದು ತಕ್ಷಣದ ನೆರವು. ರಾಜ್ಯ ಸರ್ಕಾರ ಈಗಾಗಲೇ ಬರಪೀಡಿತ ರೈತರಿಗೆ ಪ್ರತಿ ರೈತನಿಗೆ 2,500 ರೂ. ಸಹಾಯ ನೀಡುವ ಮೊದಲ ಹಂತದ ಕ್ರಮ ಘೊಷಿಸಿದೆ. ಸುಮಾರು 45ರಿಂದ 50 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯುವ ನಿರೀಕ್ಷೆ ವ್ಯಕ್ತವಾಗಿದೆ. ಆದರೆ ಇದು ಆರಂಭಿಕ ನೆರವು ಮಾತ್ರ. ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ ಮುಂದಿನ ಪರಿಹಾರ ಕ್ರಮಗಳೂ ಅಗತ್ಯ.

ಕೇಂದ್ರದ ನೆರವಿನ ವಿಚಾರವೂ ಇದೇ ರೀತಿ ತುರ್ತು ಗಮನಕ್ಕೆ ಅರ್ಹ. ರಾಜ್ಯ ಸರ್ಕಾರ 3,705.30 ಕೋಟಿ ರೂ. ಕೇಂದ್ರ ನೆರವು ಕೋರಿ ಮನವಿ ಸಲ್ಲಿಸಿದ್ದು, ಕೇಂದ್ರದ ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಬರ ಪರಿಸ್ಥಿತಿ ಪರಿಶೀಲಿಸಲಿವೆ. ಈ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಂಡು ನೆರವು ಶೀಘ್ರ ತಲುಪುವುದು ಮುಖ್ಯ.

ಬರ ಪರಿಹಾರದಲ್ಲಿ ರಾಜ್ಯ ಮತ್ತು ಕೇಂದ್ರದ ನಡುವೆ ಸಮನ್ವಯ ಅತ್ಯಗತ್ಯ. ಯಾವ ಸರ್ಕಾರ ಎಷ್ಟು ಸಹಾಯ ಮಾಡಿತು, ಯಾರು ಮಾಡಲಿಲ್ಲ ಎಂಬ ಆರೋಪ-ಪ್ರತ್ಯಾರೋಪಗಳು ಅನಗತ್ಯ. ಅದರಿಂದ ರೈತನ ಹೊಲಕ್ಕೆ ನೀರು ಬರುವುದಿಲ್ಲ. ಪರಿಹಾರ ಕ್ರಮಗಳ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಸೂಕ್ತ ವೇದಿಕೆಯಲ್ಲಿ ರ್ಚಚಿಸಬಹುದು. ಆದರೆ ಸಂತ್ರಸ್ತ ರೈತರಿಗೆ ತಲುಪಬೇಕಾದ ನೆರವು ವಿಳಂಬವಾಗಬಾರದು.

ಕೃಷಿ ಪರಿಹಾರ ಮಾತ್ರವಲ್ಲ, ಗ್ರಾಮೀಣ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳ ಮೇವು, ಬೆಳೆ ವಿಮೆ, ಸಾಲದ ಒತ್ತಡ ಮತ್ತು ಮುಂದಿನ ಹಂಗಾಮಿನ ಬಿತ್ತನೆಗೆ ಅಗತ್ಯ ನೆರವನ್ನೂ ಪರಿಗಣಿಸಬೇಕು.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜವಾಬ್ದಾರಿ ಭಿನ್ನವಾಗಿರಬಹುದು; ಆದರೆ ಸಂತ್ರಸ್ತರಿಗೆ ತುರ್ತು ನೆರವು ತಲುಪಿಸುವುದೇ ಅವುಗಳ ಮೂಲ ಗುರಿಯಾಗಿರಬೇಕು. ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡುವುದರ ಜತೆಗೆ, ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಖಚಿತಪಡಿಸಬೇಕು. ರೈತನಿಗೆ ಹಣ, ನೀರು, ಮೇವು ಮತ್ತು ಉದ್ಯೋಗದ ರೂಪದಲ್ಲಿ ನೆರವು ತಲುಪಿದಾಗ ಮಾತ್ರ ಪರಿಹಾರ ಅರ್ಥಪೂರ್ಣವಾಗುತ್ತದೆ. ಬರ ರಾಜಕೀಯದ ವಿಷಯವಾಗುವುದಕ್ಕಿಂತ, ರೈತರ ಬದುಕನ್ನು ಉಳಿಸುವ ತುರ್ತು ಕಾರ್ಯಾಚರಣೆಯ ವಿಷಯವಾಗಬೇಕು.