ರಾಜ್ಯದ ಆಡಳಿತ ಯಂತ್ರದ ಬೆನ್ನೆಲುಬು ಆಗಬೇಕಾದ ಅಧಿಕಾರಿಗಳನ್ನು, ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯೇ ಕಳಂಕಿತವಾದರೆ, ಇಡೀ ಆಡಳಿತ ವ್ಯವಸ್ಥೆಯ ಮೇಲಿನ ಜನಸಾಮಾನ್ಯರ ನಂಬಿಕೆ ಕುಸಿಯುತ್ತದೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಮೌಲ್ಯಮಾಪನದ ಲೋಪಗಳು ಲಕ್ಷಾಂತರ ಪ್ರಾಮಾಣಿಕ ಉದ್ಯೋಗಾಕಾಂಕ್ಷಿಗಳ ಕನಸುಗಳನ್ನು ನುಚ್ಚುನೂರು ಮಾಡಿವೆ. ಈ ಕರಾಳ ಸರಪಳಿಯನ್ನು ತುಂಡರಿಸಿ, ನೇಮಕಾತಿ ಪ್ರಕ್ರಿಯೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇದೀಗ ಮಹತ್ವದ ಹಾಗೂ ದಿಟ್ಟ ಹೆಜ್ಜೆಯೊಂದನ್ನು ಇಟ್ಟಿದೆ. ನವೆಂಬರ್ 15ರಂದು ನಡೆಯಲಿರುವ 319 ಗಜೆಟೆಡ್ ಪ್ರೊಬೇಷನರ್ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಪಾರದರ್ಶಕವಾಗಿ ಮತ್ತು ದೋಷರಹಿತವಾಗಿ ನಡೆಸಲು ಸರ್ಕಾರ ಸಜ್ಜಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಈ ಮಹತ್ವದ ಪರೀಕ್ಷೆಯ ಸಿದ್ಧತೆಗಳ ಕುರಿತು ಗೃಹಕಚೇರಿ ಕೃಷ್ಣಾದಲ್ಲಿ ಗುರುವಾರ ಉನ್ನತ ಮಟ್ಟದ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಈ ಬಾರಿ "ಚುನಾವಣಾ ಮಾದರಿ'ಯನ್ನು ಅನುಸರಿಸಲು ಮುಂದಾಗಿರುವುದು ಶ್ಲಾಘನೀಯ. ದೇಶದಲ್ಲಿ ಚುನಾವಣೆಗಳನ್ನು ನಿಷ್ಪಕ್ಷಪಾತವಾಗಿ ಮತ್ತು ಬಿಗಿ ಭದ್ರತೆಯಲ್ಲಿ ನಡೆಸಲಾಗುತ್ತದೆ. ಅದೇ ಮಾದರಿಯಲ್ಲಿ ಪರೀಕ್ಷಾ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಿ, ಸಿದ್ಧತೆಗಳ ಕುರಿತು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದು ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ಚುರುಕುಗೊಳಿಸುವ ತಂತ್ರವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಹೊರಡಿಸಿರುವ ಮಾರ್ಗಸೂಚಿಗಳನ್ನು ಚಾಚೂತಪ್ಪದೆ ಪಾಲಿಸಬೇಕು ಮತ್ತು ಯಾವುದೇ ಅಕ್ರಮಗಳಿಗೆ ಎಳ್ಳಷ್ಟೂ ಅವಕಾಶ ನೀಡಬಾರದು ಎಂಬ ಸರ್ಕಾರದ ಕಟ್ಟಪ್ಪಣೆಯು ವ್ಯವಸ್ಥೆಯಲ್ಲಿನ ಹಳೆಯ ಲೋಪಗಳನ್ನು ಸರಿಪಡಿಸುವ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತದೆ. ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸುವುದಷ್ಟೇ ಅಲ್ಲದೆ, ಪ್ರಶ್ನೆಪತ್ರಿಕೆಗಳ ಸಾಗಾಣಿಕೆಯಿಂದ ಹಿಡಿದು ಪರೀಕ್ಷಾ ಕೊಠಡಿಗಳ ಮೇಲ್ವಿಚಾರಣೆಯವರೆಗೆ ತಂತ್ರಜ್ಞಾನದ ಬಳಕೆ ಮತ್ತು ಪೊಲೀಸ್ ಕಣ್ಗಾವಲನ್ನು ಬಿಗಿಗೊಳಿಸುವುದು ಇಂದಿನ ಅಗತ್ಯವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಪರೀಕ್ಷೆಗಳಲ್ಲೂ ಇತ್ತೀಚಿನ ದಿನಗಳಲ್ಲಿ ಅವ್ಯವಹಾರ ಹಾಗೂ ಇತರ ಎಡವಟ್ಟುಗಳು ನಡೆದಿರುವ ಗಂಭೀರ ಆರೋಪಗಳು ಕೇಳಿಬಂದಿದ್ದು, ಇಲ್ಲೂ ಸುಧಾರಣೆ ತರುವ ಅಗತ್ಯವಿದೆ.
ಆದರೆ, ಇತಿಹಾಸ ನಮಗೆ ಕಲಿಸಿರುವ ಪಾಠವೊಂದಿದೆ; ಅದೇನೆಂದರೆ, ಕೇವಲ ಕಠಿಣ ಆದೇಶಗಳು ಅಥವಾ ಉನ್ನತ ಮಟ್ಟದ ಸಭೆಗಳಿಂದಷ್ಟೇ ವ್ಯವಸ್ಥೆ ಬದಲಾಗುವುದಿಲ್ಲ. ಅಕ್ರಮ ಎಸಗುವ ಜಾಲಗಳು ಸದಾ ಹೊಸ ತಂತ್ರಗಳನ್ನು ಹುಡುಕುತ್ತಲೇ ಇರುತ್ತವೆ. ಬ್ಲೂಟೂತ್ ಸಾಧನಗಳ ಬಳಕೆ, ನಕಲಿ ಅಭ್ಯರ್ಥಿಗಳ ಹಾವಳಿ ಅಥವಾ ಒಳಗಿನವರೇ ಶಾಮೀಲಾಗಿ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವಂತಹ ಕೃತ್ಯಗಳನ್ನು ತಡೆಯಲು ಕ್ಷಣ ಕ್ಷಣದ ಜಾಗ್ರತೆ ಅತ್ಯಗತ್ಯ. ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಅಳವಡಿಕೆ, ಸಿಸಿಟಿವಿ ಕಣ್ಗಾವಲು ಮತ್ತು ಅಭ್ಯರ್ಥಿಗಳ ಕಟ್ಟುನಿಟ್ಟಿನ ತಪಾಸಣೆಯಲ್ಲಿ ಯಾವುದೇ ರಾಜಿ ಇರಬಾರದು. ಅದೇ ಸಮಯದಲ್ಲಿ, ತಪಾಸಣೆಯ ನೆಪದಲ್ಲಿ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನಗತ್ಯ ಕಿರುಕುಳವಾಗದಂತೆಯೂ ಮಾನವೀಯತೆಯಿಂದ ವರ್ತಿಸುವುದು ಸಿಬ್ಬಂದಿಯ ಕರ್ತವ್ಯವಾಗಿದೆ. ಸರ್ಕಾರದ ಈ ದಿಟ್ಟ ನಿರ್ಧಾರಗಳು ಕಡತಗಳಿಗೆ ಸೀಮಿತವಾಗದೆ, ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಾಗ ಮಾತ್ರ ಕೆಪಿಎಸ್ಸಿ ಕಳಂಕಮುಕ್ತವಾಗಲು ಸಾಧ್ಯ.