ರಾಜ್ಯದಲ್ಲಿ ಈ ಬಾರಿ ಬೇಸಿಗೆಯ ತೀವ್ರತೆ ಭಯಂಕರವಾಗಿದೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ನಲ್ಲೇ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮೇ ತಿಂಗಳು ಇನ್ನಷ್ಟು ಭೀಕರವಾಗಿರಲಿದೆ. ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ಗ್ರಾಮ ಹಾಗೂ ಸಣ್ಣ ಪಟ್ಟಣಗಳಲ್ಲಿ ನೀರಿನ ಸಮಸ್ಯೆ ಗಂಭೀರ ಸ್ವರೂಪ ತಳೆದಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ನೀರಿನ ಸಮಸ್ಯೆಯನ್ನು ಬಗೆಹರಿಸಿ, ಪೂರೈಕೆ ಸುಗಮಗೊಳಿಸಬೇಕು ಎಂಬ ಆಶಯವಿದ್ದರೂ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಅನುದಾನವೇ ಇಲ್ಲ. ಆಡಳಿತ ಪಕ್ಷದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಈ ಸಮಸ್ಯೆಯ ಗಂಭೀರತೆಯ ಬಗ್ಗೆ ಗಮನ ಸೆಳೆದಿದ್ದಾರೆ. ತೆರಿಗೆ ಸಂಗ್ರಹದ ಹಣ ಸಿಬ್ಬಂದಿಯ ಸಂಬಳಕ್ಕೆ ವಿನಿಯೋಗವಾಗುತ್ತಿದೆ. ಉಳಿದ ಕೆಲಸಗಳಿಗೆ ಅನುದಾನವೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತುರ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆ ಮಾಡಬೇಕು.
ಕರ್ನಾಟಕದಲ್ಲಿ ಪ್ರಸ್ತುತ ಕಂಡುಬರುತ್ತಿರುವ ನೀರಿನ ಅಭಾವವು ಮಳೆಯ ಕೊರತೆಯಿಂದ ಮಾತ್ರವಲ್ಲದೆ, ನಿರ್ವಹಣೆಯ ವೈಫಲ್ಯ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿನ ಆರ್ಥಿಕ ಮುಗ್ಗಟ್ಟಿನಿಂದಲೂ ಕೂಡಿದೆ. ಸರ್ಕಾರವು ಇತ್ತೀಚೆಗೆ 45 ಕೋಟಿ ರೂಪಾಯಿಗಳನ್ನು ಕುಡಿಯುವ ನೀರಿನ ತುರ್ತು ವ್ಯವಸ್ಥೆಗಾಗಿ (ಟ್ಯಾಂಕರ್ ಮತ್ತು ಖಾಸಗಿ ಬೋರ್ವೆಲ್ ಬಾಡಿಗೆಗೆ) ಬಿಡುಗಡೆ ಮಾಡಿದೆ. ಆದರೆ, ಇದನ್ನು ಇನ್ನೂ ಹೆಚ್ಚಿಸುವ ಅಗತ್ಯವಿದೆ. ಹಣದ ಕೊರತೆ ಎದುರಿಸುತ್ತಿರುವ ಗ್ರಾಮ ಪಂಚಾಯಿತಿಗಳು ವಿಬಿ-ಜಿರಾಮ್ ಯೋಜನೆಯನ್ನು ನೀರಿನ ಸಂರಕ್ಷಣೆಗೆ ಬಳಸಿಕೊಳ್ಳುವುದು ಅಗತ್ಯ. ಚೆಕ್ಡ್ಯಾಂ ನಿರ್ವಣ, ಬೋರ್ವೆಲ್ ರೀಚಾರ್ಜ್ ಘಟಕಗಳು ಮತ್ತು ಹಳೆಯ ಕಲ್ಯಾಣಿಗಳ ಪುನಶ್ಚೇತನಕ್ಕೆ ಈ ಅನುದಾನ ಬಳಸಬಹುದು. ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಸಮುದಾಯದ ಸಹಭಾಗಿತ್ವದಲ್ಲಿ ಕೆರೆಗಳ ಹೂಳೆತ್ತುವಿಕೆ ಮತ್ತು ಅರಣ್ಯೀಕರಣದಂತಹ ಕಾರ್ಯಗಳಿಗೆ ಸರ್ಕಾರ ಹೆಚ್ಚಿನ ವೇಗ ನೀಡಬೇಕು. ಅನುದಾನದ ಕೊರತೆಯಿರುವಾಗ, ಸರ್ಕಾರವು ತುರ್ತು ಪರಿಸ್ಥಿತಿಯಲ್ಲಿ ಖಾಸಗಿ ಬೋರ್ವೆಲ್ಗಳನ್ನು ತಾತ್ಕಾಲಿಕವಾಗಿ ತನ್ನ ಸುಪರ್ದಿಗೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಬೇಕು. ಟ್ಯಾಂಕರ್ ಮಾಫಿಯಾವನ್ನು ತಡೆಯಲು ಮತ್ತು ಬೆಲೆಯನ್ನು ನಿಗದಿಪಡಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸುವುದು ಅವಶ್ಯ. ಪ್ರತಿ ಬಾರಿ ಸಮಸ್ಯೆ ಬಂದಾಗ ಎಚ್ಚೆತ್ತುಕೊಳ್ಳುವ ಬದಲು ಪ್ರತಿ ಮನೆ ಮತ್ತು ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿ, ಅದನ್ನು ಪಾಲಿಸುವವರಿಗೆ ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ನೀಡುವುದರ ಮೂಲಕ ಆರ್ಥಿಕ ಹೊರೆ ಕಡಿಮೆ ಮಾಡುವುದು ಸೂಕ್ತ.
ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳು ಅನುದಾನವಿಲ್ಲದೆ ಪರದಾಡುತ್ತಿದ್ದು, ಇದಕ್ಕೆ ಆಯಾ ಜಿಲ್ಲೆಯ ಜನಪ್ರತಿನಿಧಿಗಳು ಕಾಳಜಿ ವಹಿಸಿ, ಕಾರಣ ಪತ್ತೆ ಮಾಡಿ, ಸಂಪನ್ಮೂಲ ಕ್ರೋಡೀಕರಣದ ಮಾರ್ಗಗಳನ್ನು ಪ್ರಶಸ್ತಗೊಳಿಸಬೇಕು. ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಶಕ್ತಿ ನೀಡಲು ಸರ್ಕಾರವು ವಿಶೇಷ ಜಲ ಅನುದಾನ ಘೊಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ.