ಸಾಂದರ್ಬಿಕ ಚಿತ್ರ 
ರಾಜ್ಯ

ಸಂಪಾದಕೀಯ| ಪಂಚಾಯ್ತಿ ಚುನಾವಣೆ ಸನ್ನಿಹಿತ

ರಾಜ್ಯದ 30 ಜಿಲ್ಲೆಗಳ 1,101 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ 234 ತಾಲೂಕು ಪಂಚಾಯಿತಿಗಳ 3,580 ಕ್ಷೇತ್ರಗಳ ಮೀಸಲಾತಿಯನ್ನು ಅಂತಿಮಗೊಳಿಸಿ ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಇದರೊಂದಿಗೆ, ಸುಮಾರು ನಾಲ್ಕು ವರ್ಷಗಳಿಂದ ಬಾಕಿ ಇದ್ದ ತಾಪಂ-ಜಿಪಂ ಚುನಾವಣೆಗಳು ನಡೆಯುವ ಸಾಧ್ಯತೆಗಳು ಗೋಚರಿಸಿವೆ. ಅಕ್ಟೋಬರ್ ತಿಂಗಳಲ್ಲಿ ಮೀಸಲಾತಿಯ ಕರಡು ಪಟ್ಟಿ ಪ್ರಕಟಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯಾದ್ಯಂತ 2900ಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು. ಅವೆಲ್ಲವನ್ನು ಪರಿಶೀಲಿಸಿ, ಅಂತಿಮ ಪಟ್ಟಿಯನ್ನು ಹೊರಡಿಸಲಾಗಿದೆ. ಈ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗುತ್ತದೆ. ಆಯೋಗವು ಚುನಾವಣಾ ದಿನಾಂಕವನ್ನು ನಿರ್ಣಯಿಸಬೇಕಾಗುತ್ತದೆ.

‘2022ರಲ್ಲಿಯೇ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಅವಧಿ ಪೂರ್ಣವಾಗಿತ್ತು. ಹಿಂದಿನ ಸರ್ಕಾರ ಚುನಾವಣೆ ನಡೆಸಿರಲಿಲ್ಲ. ನಮ್ಮ ಸರ್ಕಾರ ಕೆಲವು ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿದ್ದರಿಂದ ಹಾಗೂ ಕೆಲವು ಗ್ರಾಪಂ ಕ್ಷೇತ್ರಗಳು ನಗರಸಭೆ, ನಗರಪಾಲಿಕೆ, ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದರಿಂದ ಕ್ಷೇತ್ರ ಪುನರ್​ವಿಂಗಡಣೆ ಅನಿವಾರ್ಯವಾಗಿತ್ತು. ಹೀಗಾಗಿ ವಿಳಂಬವಾಯಿತು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ಜನವರಿಯಲ್ಲಿ ಚುನಾವಣೆ ನಡೆಯಲಿದೆ ಎಂದೂ ಅವರು ತಿಳಿಸಿದ್ದಾರೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್​ರಾಜ್ ಅಧಿನಿಯಮ 1993ರ ಅನ್ವಯ ಪ್ರವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ. ಮಹಿಳೆಯರಿಗೆ ಶೇ.50ರಷ್ಟು ಸ್ಥಾನ ಮೀಸಲಿಡಲಾಗಿದೆ. ಜಿಪಂ ಮತ್ತು ತಾಪಂಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ರಾಜ್ಯ ಸಚಿವ ಸಂಪುಟ ಈ ಹಿಂದೆಯೇ ನಿರ್ಣಯ ತೆಗೆದುಕೊಂಡಿತ್ತು. ತಾಪಂ-ಜಿಪಂಗೆ ರಾಜಕೀಯ ಪಕ್ಷಗಳು ಚಿಹ್ನೆಗಳ ಆಧಾರದಲ್ಲಿ ಸ್ಪರ್ಧಿಸಬಹುದು.

ಇನ್ನೊಂದೆಡೆ, ರಾಜ್ಯದ ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ನಡೆಯುವುದು ಬಾಕಿ ಇದ್ದು, ಆಯಾ ಜಿಲ್ಲಾಧಿಕಾರಿಗಳು ಮೀಸಲಾತಿ ನಿಗದಿಪಡಿಸುವ ಜವಾಬ್ದಾರಿ ಹೊಂದಿರುತ್ತಾರೆ. ಗ್ರಾಪಂಗಳಿಗೆ ಚಿಹ್ನೆ ಆಧಾರಿತವಾಗಿ ಚುನಾವಣೆ ನಡೆಯುವುದಿಲ್ಲ. ಗ್ರಾಪಂ, ತಾಪಂ ಹಾಗೂ ಜಿಪಂಗಳು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಳಹಂತದ ಆಡಳಿತ ವ್ಯವಸ್ಥೆಗಳು. ಸ್ಥಳೀಯ ಜನರೊಂದಿಗೆ ನೇರವಾಗಿ ವ್ಯವಹರಿಸುವ, ಸಂವಹಿಸುವ ಅವಕಾಶಗಳಿರುವ ಹಂತಗಳಿವು. ಸ್ಥಳೀಯ ಅಭಿವೃದ್ಧಿಯಲ್ಲಿ, ಗ್ರಾಮಾಡಳಿತದಲ್ಲಿ ಮತ್ತು ಸರ್ಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಇವುಗಳ ಪಾತ್ರ ಮಹತ್ವದ್ದು.

ಇದಲ್ಲದೆ, ಆಡಳಿತ ಮತ್ತು ರಾಜಕೀಯಾಸಕ್ತಿ ಇರುವವರಿಗೆ ಇವು ಆರಂಭಿಕ ಮೆಟ್ಟಿಲುಗಳೂ ಆಗಬಲ್ಲವು. ಉದಾಹರಣೆಗೆ ನೋಡುವುದಾದರೆ- 1,101 ಜಿಲ್ಲಾ ಪಂಚಾಯಿತಿ ಸದಸ್ಯರು, 3,580 ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ಸುಮಾರು 90 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರು ಜನರಿಂದ ನೇರವಾಗಿ ಆರಿಸಿ ಬರುವ ಅವಕಾಶ ಇರುತ್ತದೆ. ಇನ್ನು, ಸ್ಪರ್ಧೆ ಮಾಡುವ ಎಲ್ಲರನ್ನೂ ತೆಗೆದುಕೊಂಡರೆ, ಸಂಖ್ಯೆ ಅಧಿಕವಾಗುತ್ತದೆ. ಅಂದರೆ, ಆಡಳಿತ ವ್ಯವಸ್ಥೆಯ ಮೂಲಭೂತ ಹಂತದಲ್ಲಿ ಕಾರ್ಯನಿರ್ವಹಿಸುವ ಸದವಕಾಶ ಇವರಿಗೆ ದೊರೆಯುತ್ತದೆ. ಪಂಚಾಯಿತಿ ಹಂತದಿಂದ ಶಾಸಕ, ಮಂತ್ರಿ ಅಷ್ಟೇ ಏಕೆ ಕೇಂದ್ರದ ಹಂತಕ್ಕೂ ಬೆಳೆದ ಎಷ್ಟೋ ನಿದರ್ಶನಗಳು ದೊರೆಯುತ್ತವೆ. ಪ್ರಜಾಪ್ರಭುತ್ವದ ಒಟ್ಟಾರೆ ಹಿತದೃಷ್ಟಿಯಿಂದಲೂ, ಪಂಚಾಯ್ತಿ ವ್ಯವಸ್ಥೆಯನ್ನು ಸದೃಢವಾಗಿರಿಸುವುದು ಅಗತ್ಯ. ಕಾಲಕಾಲಕ್ಕೆ ಚುನಾವಣೆ ನಡೆಸಿ, ಅನುದಾನ ಒದಗಿಸುವತ್ತಲೂ ಗಮನ ಬೇಕಾಗುತ್ತದೆ.