ಸಂಪಾದಕೀಯ | ಕಾರಾಗೃಹ ಅಕ್ರಮ ಅಕ್ಷಮ್ಯ 
ರಾಜ್ಯ

ಸಂಪಾದಕೀಯ | ಕಾರಾಗೃಹ ಅಕ್ರಮ ಅಕ್ಷಮ್ಯ

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಮ್ಮೆ ತನ್ನ ಆಡಳಿತಾತ್ಮಕ ವೈಫಲ್ಯ ಮತ್ತು ಭದ್ರತಾ ಲೋಪಗಳಿಂದಾಗಿ ಸುದ್ದಿಯಲ್ಲಿದೆ. ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ನಡೆಸಿದ ಹಠಾತ್ ದಾಳಿ ಹಾಗೂ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇರಿಸಲಾಗಿರುವ ಬ್ಯಾರಕ್​ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. 

ಅದಲ್ಲದೆ, 100ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ ಸಿಸಿಬಿ ತಂಡ ಸತತವಾಗಿ ಶೋಧ ನಡೆಸಿದಾಗ, ಜೈಲಿನಲ್ಲಿ 10ಕ್ಕೂ ಹೆಚ್ಚು ಮೊಬೈಲ್​ಗಳು, ಚಾರ್ಜರ್​ಗಳು, ಚಾಕು ಹಾಗೂ ನಿಷೇಧಿತ ಪದಾರ್ಥಗಳು ಸಿಕ್ಕಿವೆ. ಜೈಲಿನ ನಿಯಮಗಳ ಉಲ್ಲಂಘನೆ ಮತ್ತು ಕೈದಿಗಳಿಗೆ ಸಿಗುತ್ತಿರುವ ಅಕ್ರಮ ಸೌಲಭ್ಯಗಳ ನೈಜ ಚಿತ್ರಣ ಈ ಕಾರ್ಯಾಚರಣೆಯಿಂದ ಮತ್ತೊಮ್ಮೆ ಬಯಲಾಗಿದೆ. ಈ ಜೈಲಿನಲ್ಲಿ ಇಂತಹ ಅಕ್ರಮ ಬಯಲಿಗೆ ಬಂದಿರುವುದು ಇದೇ ಮೊದಲಲ್ಲ. 

ಹಿಂದೆ ನಡೆದ ಕಾರ್ಯಾಚರಣೆಗಳಲ್ಲಿ ಕೂಡ 120ಕ್ಕೂ ಹೆಚ್ಚು ಮೊಬೈಲ್​ಗಳನ್ನು ಜಪ್ತಿ ಮಾಡಲಾಗಿತ್ತು. ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮವನ್ನೂ ಕೈಗೊಳ್ಳಲಾಗಿತ್ತು. ಜೈಲಿನ ಮುಖ್ಯಸ್ಥರಾಗಿ ಎಡಿಜಿಪಿ ಅಲೋಕ್​ಕುಮಾರ್ ಅವರಂತಹ ಕಟ್ಟುನಿಟ್ಟಿನ ಅಧಿಕಾರಿಗಳನ್ನು ನೇಮಿಸಿ, ಸಿಟಿಸಿವಿ ಕ್ಯಾಮರಾಗಳ ಸಂಖ್ಯೆಯನ್ನು ಹೆಚ್ಚಿಸಿ, ಕಠಿಣ ನಿಯಮಗಳನ್ನು ಜಾರಿಗೆ ತಂದರೂ, ಕೈದಿಗಳ ಕೈಗೆ ಮೊಬೈಲ್ ಮತ್ತಿತರ ವಸ್ತುಗಳು ತಲುಪುತ್ತಿರುವುದು ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಹೊರಗಡೆ ಇರುವ ರೌಡಿಗಳು ಹಾಗೂ ವಿಚಾರಣಾಧೀನ, ಸಜಾ ಕೈದಿಗಳ ನಡುವೆ ಸಂಪರ್ಕ ಜಾಲ ಸಕ್ರಿಯವಾಗಿರುವುದು ಇದರಿಂದ ವೇದ್ಯವಾಗುತ್ತದೆ. ಗಾಂಜಾದಂತಹ ನಿಷೇಧಿತ ವಸ್ತುಗಳು, ಮೊಬೈಲ್ ಫೋನ್​ಗಳು, ಚಾಕುಗಳು ಜೈಲಿನ ಸುರಕ್ಷತಾ ತಪಾಸಣೆಗಳನ್ನು ದಾಟಿ ಕೈದಿಗಳ ಕೈಸೇರುವುದು ಒಳಗಿನ ಭ್ರಷ್ಟ ಸಿಬ್ಬಂದಿ ಹಾಗೂ ಅಧಿಕಾರಶಾಹಿಯ ಕುಮ್ಮಕ್ಕಿಲ್ಲದೆ ಸಾಧ್ಯವಿಲ್ಲ. ಹಣದಾಸೆಗಾಗಿ ಕೈದಿಗಳಿಗೆ ಅಕ್ರಮವಾಗಿ ಸೌಲಭ್ಯಗಳನ್ನು ಒದಗಿಸುವ ಜೈಲು ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಕೇವಲ ಸಸ್ಪೆಂಡ್ ಮಾಡಿದರೆ, ವರ್ಗಾವಣೆ ಮಾಡಿದರೆ ಸಾಲದು. ಅವರ ವಿರುದ್ಧ ಅಪರಾಧಿಕ ಪ್ರಕರಣಗಳನ್ನು ದಾಖಲಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಜೈಲುಗಳ ಆವರಣದಲ್ಲಿ ಮೊಬೈಲ್ ನೆಟ್​ವರ್ಕ್ ಸಂಪೂರ್ಣವಾಗಿ ಸ್ಥಗಿತಗೊಳ್ಳುವಂತೆ ಆಧುನಿಕ ಮೊಬೈಲ್ ಜಾಮರ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಳವಡಿಸಬೇಕು. 

ಜೈಲುಗಳಲ್ಲಿ ನಿರಂತರವಾಗಿ ಹಠಾತ್ ದಾಳಿ ಹಾಗೂ ತಪಾಸಣೆಗಳನ್ನು ನಡೆಸಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮುಂದುವರಿಸಬೇಕು. ಜೈಲುಗಳು ಕೇವಲ ಕೈದಿಗಳನ್ನು ಇಡುವ ಜಾಗಗಳಲ್ಲ. ಅವರನ್ನು ಸುಧಾರಣೆ ಮಾಡುವ ಗುರುತರ ಹೊಣೆಗಾರಿಕೆಯೂ ಜೈಲು ಅಧಿಕಾರಿಗಳ ಮೇಲಿದೆ. ಅಪರಾಧಿಗಳನ್ನು ತಿದ್ದುಪಡಿ ಮಾಡಿ ಸಮಾಜಕ್ಕೆ ಮುಖಾಮುಖಿಯಾಗಿಸುವ ‘ಸುಧಾರಣಾ ಗೃಹ’ವಾಗಬೇಕಿದ್ದ ಕಾರಾಗೃಹಗಳು, ಅಪರಾಧ ಚಟುವಟಿಕೆಗಳ ಸುರಕ್ಷಿತ ತಾಣಗಳಾಗುತ್ತಿರುವುದು ಕಾನೂನು ಸುವ್ಯವಸ್ಥೆಗೆ ಬಿದ್ದ ದೊಡ್ಡ ಪೆಟ್ಟು. ಸರ್ಕಾರ ಹಾಗೂ ಗೃಹ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಜೈಲು ಆಡಳಿತ ವ್ಯವಸ್ಥೆಯಲ್ಲಿ ಮೂಲಭೂತ ಮತ್ತು ಕ್ರಾಂತಿಕಾರಿ ಸುಧಾರಣೆಗಳನ್ನು ತರಬೇಕಾದ ತುರ್ತು ಅಗತ್ಯವಿದೆ.