ಕರ್ನಾಟಕದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಸುಮಾರು 19 ಲಕ್ಷ ತಲುಪಿದೆ ಎಂಬ ಮಾಹಿತಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲೇ ಸುಮಾರು 4.5 ಲಕ್ಷಕ್ಕೂ ಹೆಚ್ಚು ಮಂದಿ ಇದ್ದಾರೆ ಎಂಬ ವರದಿಗಳು ಕಳವಳ ಹುಟ್ಟುಹಾಕಿವೆ. ಬೆಳಗಾವಿ, ಮೈಸೂರು, ಮಂಡ್ಯ, ಕೊಡಗು ಹಾಗೂ ಕಲಬುರಗಿ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಗೂ ಈ ವಲಸಿಗರು ವಿಸ್ತರಿಸಿರುವುದು ಸಣ್ಣ ವಿಷಯವೇನಲ್ಲ. ರಾಷ್ಟ್ರೀಯ ಭದ್ರತೆ, ರಾಜ್ಯದ ಆಂತರಿಕ ಸುವ್ಯವಸ್ಥೆ ಮತ್ತು ಸ್ಥಳೀಯ ಸಂಪನ್ಮೂಲಗಳ ಮೇಲಿನ ಒತ್ತಡದ ದೃಷ್ಟಿಯಿಂದ ಇದು ಅತ್ಯಂತ ಸೂಕ್ಷ್ಮ ಹಾಗೂ ತಕ್ಷಣ ಗಮನಹರಿಸಬೇಕಾದ ವಿಷಯವಾಗಿದೆ.
ಯಾವುದೇ ದೇಶ ಅಥವಾ ರಾಜ್ಯದ ಗಡಿಗಳು ಅನಿಯಂತ್ರಿತ ವಲಸೆಗೆ ತೆರೆದುಕೊಂಡರೆ, ಅದು ಆರ್ಥಿಕ ಮತ್ತು ಸಾಮಾಜಿಕ ಸಮತೋಲನಕ್ಕೆ ಧಕ್ಕೆ ತರುತ್ತದೆ. ಅಗ್ಗದ ಕೂಲಿ ಕಾರ್ವಿುಕರ ಹೆಸರಿನಲ್ಲಿ ನಡೆಯುವ ಈ ಅಕ್ರಮ ಪ್ರವೇಶವು, ಕಾಲಕ್ರಮೇಣ ಸ್ಥಳೀಯರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳು ತ್ತದೆ. ಕಟ್ಟಡ ನಿರ್ಮಾಣ, ಕಾಫಿ ತೋಟಗಳು, ಹೋಟೆಲ್ ಉದ್ಯಮ ಹಾಗೂ ಸಣ್ಣಪುಟ್ಟ ವ್ಯಾಪಾರಗಳಲ್ಲಿ ಇವರು ವ್ಯಾಪಕವಾಗಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ವಲಸೆಯ ಹಿಂದಿರುವ ಕಾನೂನುಬಾಹಿರ ಜಾಲಗಳನ್ನು ಭೇದಿಸುವುದು ಅತ್ಯಂತ ತುರ್ತಾಗಿ ಆಗಬೇಕಿರುವ ಕೆಲಸ.
ಸಂಶಯಾಸ್ಪದ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವ ಸೈಬರ್ ಕೇಂದ್ರಗಳು ಮತ್ತು ಮಧ್ಯವರ್ತಿಗಳ ಜಾಲ ಈ ಸಮಸ್ಯೆಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಹಣ ಪಡೆದು ಆಧಾರ್, ಪಡಿತರ ಚೀಟಿ ಹಾಗೂ ವೋಟರ್ಸ್ ಐಡಿಗಳಂತಹ ಪ್ರಮುಖ ಗುರುತಿನ ಚೀಟಿಗಳನ್ನು ಅನಾಯಾಸವಾಗಿ ಮಾಡಿಕೊಡಲಾಗುತ್ತಿದೆ ಎಂಬ ಆರೋಪಗಳು ಸಣ್ಣದಲ್ಲ. ವ್ಯವಸ್ಥೆ ದುರುಪಯೋಗ ಆಗುತ್ತಿರುವುದು ಆಡಳಿತ ವ್ಯವಸ್ಥೆಯಲ್ಲಿರುವ ದೊಡ್ಡ ಲೋಪಕ್ಕೆ ಕನ್ನಡಿ ಹಿಡಿದಿದೆ. ಹೀಗಾಗಿ ಅಕ್ರಮ ವಲಸಿಗರಿಗಿಂತ ಹೆಚ್ಚಾಗಿ, ಅವರಿಗೆ ಇಂತಹ ನಕಲಿ ದಾಖಲೆಗಳನ್ನು ಒದಗಿಸುವ ಮೂಲ ವ್ಯವಸ್ಥೆಯನ್ನೇ ಮೊದಲು ಬಯಲಿಗೆಳೆಯಬೇಕಿದೆ.
ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಕುರಿತು ಸಮಗ್ರ ಹಾಗೂ ಪಾರದರ್ಶಕ ಪರಿಶೀಲನೆ ನಡೆಸಬೇಕು. ನಿಜವಾಗಿಯೂ ಅಕ್ರಮವಾಗಿ ನೆಲೆಸಿರುವವರನ್ನು ಕಾನೂನುಬದ್ಧವಾಗಿ ಗುರುತಿಸಿ, ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರದ ಹೊಣೆಯಾಗಿದೆ. ಕಟ್ಟುನಿಟ್ಟಿನ ತನಿಖೆ ಮತ್ತು ದಾಖಲೆಗಳ ಕೂಲಂಕಷ ಪರಿಶೀಲನೆಯ ಮೂಲಕ ಮಾತ್ರ ಇಂತಹ ವ್ಯವಸ್ಥಿತ ಜಾಲಕ್ಕೆ ಕಡಿವಾಣ ಹಾಕಲು ಸಾಧ್ಯ. ಇದೇ ವೇಳೆ, ಈ ಪ್ರಕ್ರಿಯೆ ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ನಿರಪರಾಧಿಗಳ ವಿರುದ್ಧ ಪೂರ್ವಗ್ರಹಪೀಡಿತವಾಗಿ ನಡೆಯದಂತೆ ಎಚ್ಚರ ವಹಿಸುವುದು ಅಷ್ಟೇ ಮುಖ್ಯ. ಕಾನೂನು ಜಾರಿಯ ನೆಪದಲ್ಲಿ ಸಾಮಾನ್ಯ ನಾಗರಿಕರಿಗೆ ಅಥವಾ ಕಷ್ಟಪಟ್ಟು ದುಡಿಯುವ ಸ್ಥಳೀಯ ಕಾರ್ವಿುಕರಿಗೆ ತೊಂದರೆಯಾಗಬಾರದು. ಸಮಾಜದಲ್ಲಿ ಧ್ರುವೀಕರಣ ಅಥವಾ ದ್ವೇಷದ ವಾತಾವರಣ ನಿರ್ಮಾಣ ಆಗದಂತೆ ನಿಷ್ಪಕ್ಷಪಾತವಾಗಿ ಕಾರ್ಯಾಚರಣೆ ನಡೆಸಬೇಕಿದೆ.
ಅಂತಿಮವಾಗಿ, ಅಕ್ರಮ ವಲಸೆ ಕೇವಲ ಒಂದು ರಾಜ್ಯದ ಸಮಸ್ಯೆಯಾಗಿರದೆ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ. ದಾಖಲೆಗಳ ದುರುಪಯೋಗವನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬಿಗಿ ಕ್ರಮಗಳು, ಗಡಿ ಭದ್ರತೆ ಹಾಗೂ ಸ್ಥಳೀಯ ಮಟ್ಟದ ಹೈ ಅಲರ್ಟ್ ಅತ್ಯಗತ್ಯ. ಸರ್ಕಾರ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರವನ್ನು ಬದಿಗಿಟ್ಟು, ರಾಷ್ಟ್ರೀಯ ಹಿತಾಸಕ್ತಿಗೆ ಒತ್ತು ಕೊಟ್ಟು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.