ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಇನ್ನು ಮುಂದೆ ಆಧಾರ್ ಕಾರ್ಡ್ ಬದಲು ಮತದಾರರ ಗುರುತಿನ ಚೀಟಿ ಮತ್ತು ಬಯೋಮೆಟ್ರಿಕ್ ಬಳಸಲಾಗುವುದು ಎಂಬ ಕೇಂದ್ರ ಪಂಚಾಯತ್ ರಾಜ್ ಸಚಿವರ ಇತ್ತೀಚಿನ ಹೇಳಿಕೆ ಆಡಳಿತಾತ್ಮಕವಾಗಿ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗಲ್ಲಿಗಲ್ಲಿಗಳಲ್ಲಿ ಆಧಾರ್ ಮಾಡಿಕೊಡುವವರು ಹುಟ್ಟಿಕೊಂಡಿದ್ದಾರೆ ಎಂಬ ಸಚಿವರ ಸಮರ್ಥನೆ, ಒಂದು ದಶಕಕ್ಕೂ ಹೆಚ್ಚು ಕಾಲ ದೇಶದ ಸಮಗ್ರ ಆಡಳಿತ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವ ಗುರುತಿನ ಚೀಟಿಯ ವಿಶ್ವಾಸಾರ್ಹತೆಯನ್ನೇ ಸಾರ್ವಜನಿಕವಾಗಿ ಅಣಕಿಸಿದಂತಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರಿಂದ ಇಂತಹ ಬೇಜವಾಬ್ದಾರಿ ಹೇಳಿಕೆಗಳು ಹೊರಬಿದ್ದಾಗ, ಜನಸಾಮಾನ್ಯರಲ್ಲಿ ಗೊಂದಲ ಮೂಡುವುದು ಸಹಜ.
ಭಾರತದಲ್ಲಿ ಆಧಾರ್ ಯೋಜನೆ (ಯುಐಡಿಎಐ) ಜಾರಿಗೆ ಬಂದು 17 ವರ್ಷಗಳು ಕಳೆದಿವೆ (2009). ಬೊಕ್ಕಸದಿಂದ 15ರಿಂದ 20 ಸಾವಿರ ಕೋಟಿ ರೂಪಾಯಿಗಳ ಸಾರ್ವಜನಿಕ ತೆರಿಗೆ ಹಣವನ್ನು ಇದಕ್ಕಾಗಿ ವ್ಯಯಿಸಲಾಗಿದೆ. ಬ್ಯಾಂಕ್ ಖಾತೆಯಿಂದ ಹಿಡಿದು ಮೊಬೈಲ್ ಸಿಮ್ ತೆರಿಗೆ ಪಾವತಿ, ಪಡಿತರ ಹಾಗೂ ನೇರ ನಗದು ವರ್ಗಾವಣೆಯವರೆಗೆ ಪ್ರತಿಯೊಂದಕ್ಕೂ ಆಧಾರ್ ಅನಿವಾರ್ಯ ಎಂಬ ನಿಯಮವನ್ನು ರೂಪಿಸಿ ಜನರನ್ನು ಸಾಲಿನಲ್ಲಿ ನಿಲ್ಲಿಸಲಾಯಿತು. ಇಷ್ಟೆಲ್ಲ ಕಸರತ್ತು ಮತ್ತು ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದ ನಂತರವೂ ಆಧಾರ್ ವಿಶ್ವಾಸಾರ್ಹವಲ್ಲ ಎಂದಾದರೆ, ಆ ವೈಫಲ್ಯಕ್ಕೆ ಹೊಣೆ ಯಾರು?
ಆಧಾರ್ಗೆ ಪರ್ಯಾಯವಾಗಿ ವೋಟರ್ ಐಡಿಯನ್ನು ಬಯೋಮೆಟ್ರಿಕ್ ಜೊತೆ ಜೋಡಿಸುವ ಹೊಸ ಪ್ರಕ್ರಿಯೆಗೆ ಮತ್ತೆ 10ರಿಂದ 15 ಸಾವಿರ ಕೋಟಿ ರೂಪಾಯಿಗಳ ಹೊರೆ ಬೀಳಲಿದೆ ಎಂಬ ಅಂದಾಜಿದೆ. ಈಗಾಗಲೇ ಇರುವ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸುವ ಬದಲು, ಮತ್ತೊಂದು ವೆಚ್ಚದಾಯಕ ಪ್ರಯೋಗಕ್ಕೆ ಕೈಹಾಕುವುದು ಎಷ್ಟು ಸರಿ? ಗಲ್ಲಿಗಲ್ಲಿಗಳಲ್ಲಿ ನಕಲಿ ಆಧಾರ್ಗಳು ಸೃಷ್ಟಿಯಾಗುತ್ತಿವೆ ಎಂದಾದರೆ, ವೋಟರ್ ಐಡಿಗಳು ನಕಲಿಯಾಗುವುದಿಲ್ಲ ಎಂಬುದಕ್ಕೆ ಯಾವ ಖಾತರಿಯಿದೆ? ಇದು ಸಮಸ್ಯೆಯ ಮೂಲವನ್ನು ಸರಿಪಡಿಸದೆ ಕೇವಲ ಫಲಕವನ್ನು ಬದಲಾಯಿಸುವ ಜಾಣ ಕುರುಡುತನವಷ್ಟೇ.
ಇದಲ್ಲದೆ, ಭಾರತದ ಗ್ರಾಮೀಣ ವಾಸ್ತವಗಳನ್ನು ಮರೆಯುವಂತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸ್ಥಿರವಾದ ಮೊಬೈಲ್ ನೆಟ್ವರ್ಕ್ ಮತ್ತು ಇಂಟರ್ನೆಟ್ ಸಂಪರ್ಕ ದೊಡ್ಡ ಸವಾಲಾಗಿದೆ. ಬಯೋಮೆಟ್ರಿಕ್ ದೃಢೀಕರಣದ ತಾಂತ್ರಿಕ ವೈಫಲ್ಯದಿಂದಾಗಿ ಸಾವಿರಾರು ಬಡವರು ಪಡಿತರ ಮತ್ತು ಪಿಂಚಣಿಯಿಂದ ವಂಚಿತರಾದ ಕಹಿ ಉದಾಹರಣೆಗಳು ನಮ್ಮ ಮುಂದಿವೆ. ಇಂತಹ ಸಂದರ್ಭದಲ್ಲಿ ಮತ್ತೆ ಬಯೋಮೆಟ್ರಿಕ್ ಆಧಾರಿತ ವ್ಯವಸ್ಥೆಯನ್ನು ಹೊಸದಾಗಿ ತರುವುದು ಗ್ರಾಮೀಣ ಹಾಗೂ ಅರೆಪಟ್ಟಣದ ಜನರಿಗೆ ಮತ್ತಷ್ಟು ಕಿರಿಕಿರಿ ನೀಡಿದಂತಾಗುವುದಿಲ್ಲವೇ?
ವೋಟರ್ ಐಡಿಯ ಮೂಲ ಉದ್ದೇಶ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗೆ ಸೀಮಿತವಾದದ್ದು. ಆದರೆ ಆಧಾರ್ ಎಂಬುದು ವ್ಯಕ್ತಿಯ ಸಮಗ್ರ ಗುರುತಿನ ಚೌಕಟ್ಟು. ಯಾವುದೇ ವ್ಯವಸ್ಥೆಯಲ್ಲಿ ದೋಷಗಳಿದ್ದರೆ ತಂತ್ರಜ್ಞಾನ, ಕಟ್ಟುನಿಟ್ಟಿನ ನಿಯಮಾವಳಿ ಮತ್ತು ಸುರಕ್ಷತಾ ಕ್ರಮಗಳ ಮೂಲಕ ಅದನ್ನು ಬಲಪಡಿಸಬೇಕೇ ಹೊರತು, ಹಳೆಯದನ್ನು ಕೈಬಿಟ್ಟು ಹೊಸದೊಂದು ಪ್ರಕ್ರಿಯೆಯನ್ನು ಆರಂಭಿಸುವುದು ಸೂಕ್ತವಲ್ಲ. ಜನರನ್ನು ಮತ್ತೆ ಮತ್ತೆ ಗುರುತಿನ ಗೊಂದಲದ ಸಾಲಿನಲ್ಲಿ ನಿಲ್ಲಿಸುವುದನ್ನು ಬಿಟ್ಟು, ವಾಸ್ತವಿಕ ಪರಿಹಾರಗಳತ್ತ ಗಮನಹರಿಸುವುದು ಇಂದಿನ ತುರ್ತು ಅಗತ್ಯ.